ಗಾಝಾ ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ
PC : PTI
ದೋಹಾ : ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಮಧ್ಯವರ್ತಿಗಳು ಬುಧವಾರ ಘೋಷಿಸಿದ್ದಾರೆ.
ಆ ಮೂಲಕ ಗಾಝಾ ಪಟ್ಟಿಯಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ವಿನಾಶಕಾರಿ ಯುದ್ಧಕ್ಕೆ ವಿರಾಮ ಸಿಗಲಿದೆ. ಖತರ್ ರಾಜಧಾನಿಯಲ್ಲಿ ವಾರಗಳ ಕಾಲ ನಡೆದ ಮಾತುಕತೆಗಳ ನಂತರ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ.
ಒಪ್ಪಂದಂತೆ, ಹಮಾಸ್ – ಇಸ್ರೇಲ್ ಪರಸ್ಪರ ಒತ್ತೆಸೆರೆಯಲ್ಲಿಟ್ಟಿರುವ ಡಜನ್ಗಟ್ಟಲೆ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ಈ ಕದನ ವಿರಾಮವು ಧ್ವಂಸಗೊಂಡು ನಲುಗುತ್ತಿರುವ ಯುದ್ಧಪೀಡಿತ ಪ್ರದೇಶಕ್ಕೆ ಅತ್ಯಂತ ಅಗತ್ಯವಿರುವ ಮಾನವೀಯ ಸಹಾಯವನ್ನು ಒದಗಿಸಲಿದೆ.
ಖತರ್ ಮತ್ತು ಹಮಾಸ್ನ ಅಧಿಕಾರಿಗಳು ಒಪ್ಪಂದಕ್ಕೆ ಬರಲಾಗಿದೆ ಎಂದು ದೃಢಪಡಿಸಿದ್ದಾರೆ. ಆದರೆ ಇಸ್ರೇಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಒಪ್ಪಂದವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಂಪುಟವು ಅನುಮೋದಿಸಬೇಕಾಗಿದೆ. ಆ ಬಳಿಕ ಮುಂಬರುವ ದಿನಗಳಲ್ಲಿ ಕದನವಿರಾಮ ಒಪ್ಪಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಕದನವಿರಾಮ ಒಪ್ಪಂದದಂತೆ 6 ವಾರಗಳ ಕಾಲ ಯುದ್ಧವು ನಿಲ್ಲಲಿಎ. ಅದರೊಂದಿಗೆ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಮಾತುಕತೆಗಳು ಗರಿಗೆರದಲಿವೆ.