ಇಸ್ರೇಲ್-ಹಮಾಸ್ ಕದನವಿರಾಮ ಆರಂಭ
Photo- PTI
ಗಾಝಾ: ಭೀಕರ ಯುದ್ಧಕ್ಕೆ ಸಾಕ್ಷಿಯಾಗಿರುವ ಗಾಝಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಏರ್ಪಟ್ಟಿರುವ ನಾಲ್ಕು ದಿನಗಳ ಕದನ ವಿರಾಮವು ಶುಕ್ರವಾರ ಮುಂಜಾನೆ ಸ್ಥಳೀಯ ಕಾಲಮಾನ 7:00 ಗಂಟೆಗೆ ಆರಂಭಗೊಂಡಿದೆ.
ಮೂಲತಃ ಕದನ ವಿರಾಮವು ಗುರುವಾರ ಬೆಳಗ್ಗಿನಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಝಾಕಿ ಹ್ಯಾನೆಗ್ಬಿ ಅವರು ಯಾವುದೇ ಕಾರಣವನ್ನು ನೀಡದೆ, ಕದನ ವಿರಾಮ ಒಂದು ದಿನ ವಿಳಂಬವಾಗಿ ಜಾರಿಗೆಗೆ ಬರಲಿದೆ ಎಂದು ಪ್ರಕಟಿಸಿದ್ದಾರೆಂದು ವಿದೇಶಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಕದನ ವಿರಾಮ ಒಪ್ಪಂದದಂತೆ ಇಸ್ರೇಲ್ ಹಾಗೂ ಹಮಾಸ್ ಬಿಡುಗಡೆಗೊಳಿಸಲಿರುವ ವ್ಯಕ್ತಿಗಳ ಪಟ್ಟಿಯನ್ನು ಗುರುವಾರ ವಿನಿಮಯ ಮಾಡಿಕೊಂಡಿದ್ದವು. ಹಮಾಸ್ ಒತ್ತೆಸೆರೆಯಿಂದ ಬಿಡುಗಡೆಗೊಳಿಸಿರುವ ವ್ಯಕ್ತಿಗಳ ಮೊದಲ ಗುಂಪಿನಲ್ಲಿ 13 ಮಂದಿ ಮಹಿಳೆಯರು ಹಾಗೂ ಮಕ್ಕಳ ಹೆಸರುಗಳಿವೆ. ಆದರೆ ತಾನು ಎಷ್ಟು ಮಂದಿ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸುವೆನೆಂಬ ಬಗ್ಗೆ ಇಸ್ರೇಲ್ ಈವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಮಾಸ್ ಬಿಡುಗಡೆಗೊಳಿಸುವ ಪ್ರತಿ ಓರ್ವ ಒತ್ತೆಯಾಳಿಗೆ ಪ್ರತಿಯಾಗಿ ತಾನು ಮೂರು ಫೆಲೆಸ್ತೀನ್ಕೈದಿಗಳನ್ನು ಬಿಡುಗಡೆ ಗೊಳಿಸುವುದಾಗಿ ಇಸ್ರೇಲ್ ಈಗಾಗಲೇ ತಿಳಿಸಿದೆ.
ಈ ಮಧ್ಯೆ ಇಸ್ರೇಲ್ ದಾಳಿಗಳಿಂದಾಗಿ ಗಾಝಾಪಟ್ಟಿಯಲ್ಲಿ ಮೃತಪಟ್ಟ ಫೆಲೆಸ್ತೀನಿಯರ ಸಂಖ್ಯೆ 14,854ಕ್ಕೇರಿದೆಯೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಆ್ಯನಾದೋಲ್ ವರದಿ ಮಾಡಿದೆ. ಮೃತರಲ್ಲಿ 6,150 ಮಕ್ಕಳು ಹಾಗೂ 4 ಸಾವಿರ ಮಹಿಳೆಯರು ಒಳಗೊಂಡಿದ್ದಾರೆಂದು ಅದು ತಿಳಿಸಿದೆ. ಇದರ ಜೊತೆಗೆ ಇತರ 7 ಸಾವಿರ ಮಂದಿ ಲೆಕ್ಕಕ್ಕೆ ಸಿಕ್ಕಿಲ್ಲವೆಂದು ಅದು ಹೇಳಿದೆ.