ಮಕ್ಕಳ ಹಕ್ಕುಗಳ ಉಲ್ಲಂಘನೆ ಆರೋಪ : ವಿಶ್ವಸಂಸ್ಥೆಯ `ಅವಮಾನದ ಪಟ್ಟಿ'ಗೆ ಇಸ್ರೇಲ್, ಹಮಾಸ್
ಅವಾಸ್ತವಿಕ, ಭ್ರಾಂತಿಯ ನಿರ್ಧಾರ ಎಂದು ಇಸ್ರೇಲ್ ಟೀಕೆ
ವಿಶ್ವಸಂಸ್ಥೆ | PC : PTI
ವಿಶ್ವಸಂಸ್ಥೆ : ಸಶಸ್ತ್ರ ಸಂಘರ್ಷದ ಸಂದರ್ಭ ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ದಾಖಲಿಸಿದ ಬಳಿಕ ಇಸ್ರೇಲ್ ಹಾಗೂ ಹಮಾಸ್ ಅನ್ನು ವಿಶ್ವಸಂಸ್ಥೆ `ಅವಮಾನದ ಪಟ್ಟಿಗೆ' ಸೇರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರ ಕಚೇರಿ ಸಲ್ಲಿಸಿರುವ ವಾರ್ಷಿಕ ವರದಿಯಲ್ಲಿ ಈ ಪಟ್ಟಿಯನ್ನು ಲಗತ್ತಿಸಲಾಗಿದೆ. ಇಸ್ರೇಲ್ ಮತ್ತು ಹಮಾಸ್ ಈ ಪಟ್ಟಿಯಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದು ಪಟ್ಟಿಯಲ್ಲಿರುವ ರಶ್ಯ, ಐಸಿಸ್, ಅಲ್ಖೈದಾ, ಬೋಕೊ ಹರಾಮ್, ಅಫ್ಘಾನಿಸ್ತಾನ, ಇರಾಕ್, ಮ್ಯಾನ್ಮಾರ್, ಸೊಮಾಲಿಯಾ, ಯೆಮನ್ ಮತ್ತು ಸಿರಿಯಾದ ಜತೆ ಗುರುತಿಸಿಕೊಂಡಿದೆ.
ಇಸ್ರೇಲ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಥಮ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ವರದಿ ಹೇಳಿದೆ. ಈ ಕುರಿತ ಔಪಚಾರಿಕ ಅಧಿಸೂಚನೆಯನ್ನು ಶುಕ್ರವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಕಚೇರಿಯು ವಿಶ್ವಸಂಸ್ಥೆಗೆ ಇಸ್ರೇಲ್ನ ಕಾಯಂ ಪ್ರತಿನಿಧಿ ಗಿಲಾಡ್ ಎರ್ಡನ್ಗೆ ಹಸ್ತಾಂತರಿಸಿದೆ.
ಈ ಹಿಂದಿನ ವರದಿಗಳು ಇಸ್ರೇಲ್- ಫೆಲೆಸ್ತೀನ್ನ ಸಂಘರ್ಷದ ಅಧ್ಯಾಯಗಳನ್ನು ಒಳಗೊಂಡಿದ್ದು ಇಸ್ರೇಲ್ನಿಂದ ಮಕ್ಕಳ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿತ್ತು. ಆದರೆ ಇದುವರೆಗೆ ವರದಿಯ ಜತೆಗೆ ಲಗತ್ತಿಸುವ ವರದಿ ವರ್ಷದಲ್ಲಿ ಮಕ್ಕಳ ಸುರಕ್ಷತೆಯನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳದ ಪಕ್ಷಗಳ ಪಟ್ಟಿಯಲ್ಲಿ ಇಸ್ರೇಲ್ ಕಾಣಿಸಿಕೊಂಡಿರಲಿಲ್ಲ. `ಅವಮಾನದ ಪಟ್ಟಿ' ಎಂದು ಕರೆಸಿಕೊಳ್ಳುವ ವಿಶ್ವಸಂಸ್ಥೆಯ ದಾಖಲೆಯಲ್ಲಿ ಇಸ್ರೇಲ್ ಅನ್ನು ಸೇರ್ಪಡೆಗೊಳಿಸಿರುವ ವಿಶ್ವಸಂಸ್ಥೆಯ ನಿರ್ಧಾರ ಅವಾಸ್ತವಿಕ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟೀಕಿಸಿದ್ದಾರೆ.
ಹಮಾಸ್ ಕೊಲೆಗಡುಕರ ಬೆಂಬಲಿಗರ ಜತೆ ಸೇರುವ ಮೂಲಕ ವಿಶ್ವಸಂಸ್ಥೆಯು ಇವತ್ತು ಸ್ವತಃ ಇತಿಹಾಸದ ಕಪ್ಪುಪಟ್ಟಿಗೆ ಸೇರಿದೆ. ಐಡಿಎಫ್(ಇಸ್ರೇಲ್ ಭದ್ರತಾ ಪಡೆ) ವಿಶ್ವದಲ್ಲಿ ಅತ್ಯಂತ ನೈತಿಕ ಸೇನೆಯಾಗಿದ್ದು ವಿಶ್ವಸಂಸ್ಥೆಯ ಯಾವುದೇ ಭ್ರಮೆಯ ನಿರ್ಧಾರ ಈ ವಾಸ್ತವವನ್ನು ಬದಲಾಯಿಸದು' ಎಂದು ನೆತನ್ಯಾಹು ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸುಮಾರು 8000 ಮಕ್ಕಳು ಹತರಾಗಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ವರದಿ ಮಾಡಿತ್ತು. ಆದರೆ ಕಳೆದ ತಿಂಗಳು ಏಕಾಏಕಿ ಈ ಸಂಖ್ಯೆಯನ್ನು ಸುಮಾರು 6,500ಕ್ಕೆ ಇಳಿಸಲಾಗಿದೆ. ಇದು ಹಮಾಸ್ ಅಧಿಕಾರಿಗಳ ಅಂಕಿಅಂಶದ ವಿಶ್ವಸನೀಯತೆಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಆದರೆ ಯಾವುದೇ ಪರಿಶೀಲನೆ ನಡೆಸದೆ ವಿಶ್ವಸಂಸ್ಥೆ ವರದಿಯಲ್ಲಿ ಈ ಅಂಕಿಅಂಶವನ್ನು ಉಲ್ಲೇಖಿಸಲಾಗಿದೆ ಎಂದು ಇಸ್ರೇಲ್ ಮೂಲಗಳು ಖಂಡಿಸಿವೆ.
• ನಾಚಿಕೆಗೇಡಿನ ನಿರ್ಧಾರ: ಇಸ್ರೇಲ್ ಸಚಿವರ ಟೀಕೆ
ಇಸ್ರೇಲ್ ಅನ್ನು `ಅವಮಾನದ ಪಟ್ಟಿಗೆ' ಸೇರಿಸುವ ನಿರ್ಧಾರವು ವಿಶ್ವಸಂಸ್ಥೆಯೊಂದಿಗಿನ ಇಸ್ರೇಲ್ನ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ. ಐಡಿಎಫ್(ಇಸ್ರೇಲ್ ಭದ್ರತಾ ಪಡೆ) ಅನ್ನು ಕಪ್ಪುಪಟ್ಟಿಗೆ ಸೇರಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ನಾಚಿಕೆಗೇಡಿನ ನಿರ್ಧಾರವು ಕುತ್ಸಿತ, ಹೇಯ ಕೃತ್ಯವಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ `ಎಕ್ಸ್'(ಟ್ವೀಟ್) ಮಾಡಿದ್ದಾರೆ.
`ಸಾವಿರಾರು ಅಮಾಯಕರನ್ನು ಗಲ್ಲಿಗೇರಿಸಿದ ಇರಾನ್ ಅಧ್ಯಕ್ಷರ ನೆನಪಿಗಾಗಿ ಒಂದು ನಿಮಿಷದ ಮೌನಾಚರಣೆ ಮಾಡಿದ್ದ ಗುಟೆರಸ್, ಹಮಾಸ್ನ ಲೈಂಗಿಕ ಅಪರಾಧಗಳನ್ನು ಮತ್ತು ಇಸ್ರೇಲ್ನ ಆತ್ಮರಕ್ಷಣೆಯ ಹಕ್ಕುಗಳನ್ನು ತಿರಸ್ಕರಿಸಿದ ಯೆಹೂದಿ ವಿರೋಧಿ ಪ್ರಧಾನ ಕಾರ್ಯದರ್ಶಿಯಾಗಿ ಇತಿಹಾಸದಲ್ಲಿ ನೆನಪಿಸಿಕೊಳ್ಳುತ್ತಾರೆ' ಎಂದವರು ಹೇಳಿದ್ದಾರೆ.
ಐಡಿಎಫ್ ವಿಶ್ವದಲ್ಲಿ ಅತ್ಯಂತ ನೈತಿಕ ಸೈನ್ಯವಾಗಿದೆ. ಯಾವುದೇ ಕಾಲ್ಪನಿಕ ವರದಿಯು ಅದನ್ನು ಬದಲಾಯಿಸದು. ಈ ಕ್ರಮವು ವಿಶ್ವಸಂಸ್ಥೆಯೊಂದಿಗಿನ ಇಸ್ರೇಲ್ನ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ' ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. `ವಿಶ್ವಸಂಸ್ಥೆಯ ಅನೈತಿಕ ನಿರ್ಧಾರವು ಹಮಾಸ್ ಹೋರಾಟಗಾರರನ್ನು ಬೆಂಬಲಿಸುತ್ತದೆ ಮತ್ತು ಹಮಾಸ್ ಅನ್ನು ಪುರಸ್ಕರಿಸಲಿದೆ. ಕಪ್ಪುಪಟ್ಟಿಗೆ ಸೇರಿಸುವ ನಿರ್ಧಾರ ಕೇವಲ ಪ್ರಧಾನ ಕಾರ್ಯದರ್ಶಿಯದ್ದಾಗಿದೆ. ಯುದ್ಧ ಆರಂಭವಾದಂದಿನಿಂದ ಮತ್ತು ಅದಕ್ಕೂ ಮೊದಲು ಅವರ ನಿರ್ಧಾರಗಳು ಹಮಾಸ್ ಹೋರಾಟಗಾರರನ್ನು ಪುರಸ್ಕರಿಸುವ ಜತೆಗೆ, ಮಕ್ಕಳನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಪ್ರೇರೇಪಿಸಿವೆ' ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ನ ಕಾಯಂ ಪ್ರತಿನಿಧಿ ಗಿಲಾಡ್ ಎರ್ಡನ್ ಟೀಕಿಸಿದ್ದಾರೆ.