88ನೇ ದಿನಕ್ಕೆ ಕಾಲಿರಿಸಿದ ಇಸ್ರೇಲ್-ಹಮಾಸ್ ಸಂಘರ್ಷ
Photo- PTI
ಜೆರುಸಲೇಂ: ಕಳೆದ ವರ್ಷ ಆಕ್ಟೋಬರ್ 7ರಂದು ಆರಂಭಗೊಂಡ ಇಸ್ರೇಲ್-ಹಮಾಸ್ ಸಂಘರ್ಷವು ಮಂಗಳವಾರ 88ನೇ ದಿನಕ್ಕೆ ಕಾಲಿರಿಸಿದೆ. ಈ ಭೀಕರ ಕದನದಲ್ಲಿ ಈವರೆಗೆ 1140 ಮಂದಿ ಇಸ್ರೇಲಿಗಳು ಸಾವನ್ನಪ್ಪಿದ್ದರು ಹಾಗೂ 250 ಮಂದಿಯನ್ನು ಹಮಾಸ್ ಹೋರಾಟಗಾರರು ಒತ್ತೆಸೆರೆಯಿರಿಸಿದ್ದರು. ಅವರಲ್ಲಿ ಪ್ರಸಕ್ತ 129 ಮಂದಿ ಹಮಾಸ್ ನ ಬಂಧನದಲ್ಲಿದ್ದಾರೆ ಎಂದು ಇಸ್ರೇಲಿ ಸರಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ ಹಮಾಸ್ ಆಡಳಿತವಿರುವ ಗಾಝಾದ ಆರೋಗ್ಯ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಇಸ್ರೇಲ್ ಗಾಝಾದ ಮೇಲೆ ನಡೆಸಿದ ಪ್ರತೀಕಾರ ದಾಳಿಗಳಲ್ಲಿ 22 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂರನೇ ಎರಡರಷ್ಟು ಮಂದಿ ಮಹಿಳೆಯರು ಹಾಗೂ ಮಕ್ಕಳು. ಅಲ್ಲದೆ ಸುಮಾರು 50 ಸಾವಿರ ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ ಗಾಝಾದಲ್ಲಿ ಇಸ್ರೇಲ್ ನ ಬಾಂಬ್ ದಾಳಿಗೆ ತುತ್ತಾದ ಖಾನ್ ಯೂನಿಸ್ ನ ಕಟ್ಟಡವೊಂದರಿಂದ ಜನರನ್ನು ತೆರವುಗೊಳಿಸುತ್ತಿರುವ ದೃಶ್ಯಗಳನ್ನು ಫೆಲೆಸ್ತೀನ್ ರೆಡ್ ಕ್ರಿಸೆಂಟ್ ಸೊಸೈಟಿ ಪೋಸ್ಟ್ ಮಾಡಿದೆ.
ಖಾನ್ ಯೂನಿಸ್ನಲ್ಲಿರುವ ಫೆಲೆಸ್ತೀನ್ ರೆಡ್ ಕ್ರಿಸೆಂಟ್ ಸೊಸೈಟಿ ಕಟ್ಟಡದಲ್ಲಿ ಆಶ್ರಯ ಪಡೆದಿರುವ ನಿರ್ವಸಿತರ ಮೇಲೆ ಎರಡನೇ ಬಾರಿ ದಾಳಿ ನಡೆದಿದೆ. ನವಜಾತ ಶಿಶು ಸೇರಿದಂತೆ ಐದು ಮಂದಿ ಫೆಲೆಸ್ತೀನ್ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಹಾಗೂ ಓರ್ವ ಸ್ವಯಂಸೇವಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.