ಗಾಝಾದ ಮೇಲಿನ ಆಕ್ರಮಣ ತೀವ್ರಗೊಳಿಸಿದ ಇಸ್ರೇಲ್
Photo - PTI
ಗಾಝಾ: ಆಸ್ಪತ್ರೆಗಳ ಸಮೀಪ ವೈಮಾನಿಕ ದಾಳಿ ನಡೆಯುವ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿರುವಂತೆಯೇ ಸೋಮವಾರ ಉತ್ತರ ಮತ್ತು ಮಧ್ಯ ಗಾಝಾವನ್ನು ಗುರಿಯಾಗಿಸಿ ವೈಮಾನಿಕ ಹಾಗೂ ನೆಲದ ಮೇಲಿನ ಆಕ್ರಮಣವನ್ನು ಇಸ್ರೇಲ್ ತೀವ್ರಗೊಳಿಸಿದೆ ಎಂದು ವರದಿಯಾಗಿದೆ.
ಮಧ್ಯ ಗಾಝಾ ಪ್ರದೇಶದ ‘ನಾರ್ಥ್ ಸೌತ್’ ಹೆದ್ದಾರಿಯತ್ತ ಇಸ್ರೇಲ್ ನ ಟ್ಯಾಂಕ್ ಗಳು ಮತ್ತು ಬುಲ್ಡೋಝರ್ಗಳು ಮುಂದುವರಿಯುತ್ತಿರುವ ವೀಡಿಯೊವನ್ನು ‘ಅಸೋಸಿಯೇಟೆಡ್ ಪ್ರೆಸ್’ ಬಿಡುಗಡೆಗೊಳಿಸಿದೆ. ನಾವು ಗಾಝಾದ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಿದ್ದೇವೆ’ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ.
ಇಸ್ರೇಲ್ ಸೇನೆ ಗಾಝಾ ಪಟ್ಟಣದತ್ತ ಮತ್ತು ಉತ್ತರ ಗಾಝಾದ ಸುತ್ತಮುತ್ತಲಿನ ಪ್ರದೇಶಕ್ಕೆ ಎರಡೂ ದಿಕ್ಕಿನಲ್ಲಿ ಮುಂದುವರಿದಿದೆ. ಜನನಿಬಿಡ ವಸತಿ ಪ್ರದೇಶದಲ್ಲಿ ಇಸ್ರೇಲ್ ಸೇನೆ - ಹಮಾಸ್ ನಡುವೆ ಭೀಕರ ಸಂಘರ್ಷ ನಡೆಯುತ್ತಿರುವುದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಬಹುದು ಎಂದು ವರದಿಯಾಗಿದೆ. ಇದೀಗ ನಾರ್ಥ್ ಸೌತ್ ಹೆದ್ದಾರಿಯಲ್ಲಿ ಸಂಚಾರವನ್ನು ಇಸ್ರೇಲ್ ಸೇನೆ ನಿರ್ಬಂಧಿಸಿರುವುದರಿಂದ ಉತ್ತರ ಗಾಝಾದಲ್ಲಿ ಉಳಿದಿರುವ ಸಾವಿರಾರು ಫೆಲೆಸ್ತೀನೀಯರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಉತ್ತರ ಗಾಝಾದ ಆಸ್ಪತ್ರೆಗಳಲ್ಲಿ ಸುಮಾರು 1,17,000 ಸ್ಥಳಾಂತರಗೊಂಡ ಜನತೆ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
* ಅಕ್ಟೋಬರ್ 7ರಿಂದ ಯುದ್ಧದಲ್ಲಿ 3,457 ಮಕ್ಕಳ ಸಹಿತ ಕನಿಷ್ಠ 8,306 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ.
* ಸಂಘರ್ಷ ಆರಂಭಗೊಂಡಂದಿನಿಂದ ಗಾಝಾದಿಂದ 1.4 ದಶಲಕ್ಷಕ್ಕೂ ಅಧಿಕ ಜನ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
* ಹಮಾಸ್ ದಾಳಿಯಿಂದ ಇಸ್ರೇಲ್ ನಲ್ಲಿ 1,400ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಸೋಮವಾರ ಗಾಝಾದಲ್ಲಿ ತನ್ನ ಪಡೆ ಹಲವಾರು ಹಮಾಸ್ ಹೋರಾಟಗಾರರನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
* ಅಕ್ಟೋಬರ್ 7ರ ಬಳಿಕ ಪಶ್ಚಿಮ ದಂಡೆಯಲ್ಲಿ 121 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನೀಯನ್ ಆರೋಗ್ಯ ಇಲಾಖೆ ಹೇಳಿದೆ.