ಯುದ್ಧ ಕೈಬಿಡಲು ಅಂತರರಾಷ್ಟ್ರೀಯ ಒತ್ತಡದ ನಡುವೆಯೇ ರಫಾದಲ್ಲಿ ಕಾರ್ಯಾಚರಣೆ ಮುಂದುವರಿಸಲು ಸಜ್ಜಾಗುತ್ತಿರುವ ಇಸ್ರೇಲ್
PC : NDTV
ಹೊಸದಿಲ್ಲಿ: ಗಾಝಾ ಪಟ್ಟಿಯ ದಕ್ಷಿಣದ ನಗರವಾದ ರಫಾದಲ್ಲಿ ಇಸ್ರೇಲಿ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಮಟ್ಟದ ಎಚ್ಚರಿಕೆಗಳನ್ನು ಕಡೆಗಣಿಸಿ ಮುಂದುವರಿಸಲು ಸಜ್ಜಾಗಿವೆ. ರಫಾದಲ್ಲಿರುವ ಹಮಾಸ್ ತಾಣಗಳ ಮೇಲೆ ದಾಳಿ ನಡೆಸುವ ಮುಂಚಿತವಾಗಿ ಫೆಲೆಸ್ತೀನಿ ನಾಗರಿಕರನ್ನು ತೆರವುಗೊಳಿಸಲು ಇಸ್ರೇಲಿ ಮಿಲಿಟರಿ ಸಿದ್ಧವಾಗುತ್ತಿದೆ.
ಇಸ್ರೇಲ್ ಸರ್ಕಾರದ ಅನುಮತಿ ದೊರೆತ ಕೂಡಲೇ ರಫಾ ನಗರವನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಹಿರಿಯ ಇಸ್ರೇಲಿ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ರಫಾ ಮೇಲೆ ದಾಳಿ ನಡೆಸುವ ಯೋಜನೆಯನ್ನು ಕೈಬಿಡಬೇಕೆಂದು ಇಸ್ರೇಲ್ಗೆ ಅಮೆರಿಕಾ ಆಗ್ರಹಿಸಿದೆ. ಗಾಝಾದ ಅರ್ಧದಷ್ಟು ಜನರು, ಅಂದರೆ ಸುಮಾರು 23 ಲಕ್ಷ ಜನರು ರಫಾದಲ್ಲಿದ್ದಾರೆ.
ಇಸ್ರೇಲಿ ಸರ್ಕಾರ ಈಗಾಗಲೇ ತಲಾ 10-12 ಜನರಿಗೆ ಅವಕಾಶವಿರುವ 40,000 ಟೆಂಟ್ಗಳನ್ನು ಖರೀದಿಸಿದ್ದು, ಇದು ಫೆಲೆಸ್ತೀನೀಯರನ್ನು ತೆರವುಗೊಳಿಸುವ ಅದರ ಯೋಜನೆಯ ಮುನ್ಸೂಚನೆ ಎಂದೇ ತಿಳಿಯಲಾಗಿದೆ.
ಬುಧವಾರ ಇಸ್ರೇಲ್ನ ಪ್ರಮುಖ ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಗಳು ಕೈರೋದಲ್ಲಿ ಸಭೆ ನಡೆಸಿದ್ದಾರೆ.
ಆದರೆ ರಫಾ ಮೇಲೆ ದಾಳಿ ಮುಂದುವರಿಸುವುದನ್ನು ಈಜಿಪ್ಟ್ ವಿರೋಧಿಸಿದೆ ಹಾಗೂ ಈ ದಾಳಿ ತಪ್ಪಿಸಲು ಫೆಲೆಸ್ತೀನೀಯರನ್ನು ಈಜಿಪ್ಟ್ ಗಡಿಯೊಳಗೆ ದೂಡುವುದನ್ನು ತಾನು ಅನುತಿಸುವುದಿಲ್ಲ ಇದು ಸಾಕಷ್ಟು ಸಾವುನೋವುಗಳಿಗೆ ಕಾರಣವಾಗಬಹುದೆಂದೂ ಅದು ಎಚ್ಚರಿಸಿದೆ.