ಅಮೆರಿಕ ರೂಪಿಸಿದ ಯೋಜನೆ ಸೋರಿಕೆ | ಇಸ್ರೇಲ್-ಲೆಬನಾನ್ ಕದನ ವಿರಾಮಕ್ಕೆ ಅಮೆರಿಕ ಪ್ರಸ್ತಾಪ
►60 ದಿನಗಳ ಯುದ್ಧ ನಿಲುಗಡೆ ►ದಕ್ಷಿಣ ಲೆಬನಾನ್ ನಿಂದ ಹಿಜ್ಬುಲ್ಲಾ, ಇಸ್ರೇಲ್ ಪಡೆ ವಾಪಸಾತಿಯ ಷರತ್ತು
PC : aljazeera.com
ವಾಷಿಂಗ್ಟನ್ : ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಲೆಬನಾನ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಅಲು ಅಮೆರಿಕ ರೂಪಿಸಿದ ಕರಡು ಯೋಜನೆಯ ವಿವರ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ. ಅಮೆರಿಕದ ಕರಡು ಯೋಜನೆಯು ಪ್ರಕಾರ 60 ದಿನಗಳ ಆರಂಭಿಕ ಕದನ ವಿರಾಮ ಮತ್ತು ದಕ್ಷಿಣ ಲೆಬನಾನ್ನಿಂದ ಹಿಜ್ಬುಲ್ಲಾ ಹಾಗೂ ಇಸ್ರೇಲ್ ನ ಸೇನೆಯ ವಾಪಸಾತಿಗೆ ಕರೆ ನೀಡಿದೆ.
ಅಮೆರಿಕ ರೂಪಿಸಿದ `ಕದನ ವಿರಾಮ ಮತ್ತು ವಿಶ್ವಸಂಸ್ಥೆಯ ನಿರ್ಣಯ ಸಂಖ್ಯೆ 1701ರ ಅನುಷ್ಠಾನ' ಯೋಜನೆಯ ಇತರ ಪ್ರಮುಖ ಅಂಶಗಳು ಹೀಗಿವೆ:
*ವಿಶ್ವಸಂಸ್ಥೆಯ ನಿರ್ಣಯ ಸಂಖ್ಯೆ 1701 ಲೆಬನಾನ್ ನ ಲಿಟಾನ್ ನದಿಯ ದಕ್ಷಿಣದಲ್ಲಿ ಹಿಜ್ಬುಲ್ಲಾ ಉಪಸ್ಥಿತಿಯನ್ನು ನಿಷೇಧಿಸಿದೆ.
* 60 ದಿನಗಳ ಅನುಷ್ಠಾನ ಅವಧಿಯಲ್ಲಿ ಗಡಿಯುದ್ದಕ್ಕೂ ಲೆಬನಾನ್ ಸೇನೆಯನ್ನು ನಿಯೋಜಿಸಲಾಗುವುದು ಮತ್ತು ದಕ್ಷಿಣ ಲೆಬನಾನ್ ನಲ್ಲಿ ಹಿಜ್ಬುಲ್ಲಾಗಳ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
* ಇಸ್ರೇಲ್ ಗೆ ಸನ್ನಿಹಿತ ಬೆದರಿಕೆ ವಿರುದ್ಧ ಆತ್ಮರಕ್ಷಣೆಗಾಗಿ ಹಿಜ್ಬುಲ್ಲಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಹಕ್ಕನ್ನು ನೀಡಲಾಗಿದೆ.
* ಇಸ್ರೇಲ್ ನ ಯುದ್ಧವಿಮಾನಗಳು ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣಕ್ಕಾಗಿ ಲೆಬನಾನ್ ಮೇಲೆ ಹಾರುವುದನ್ನು ಮುಂದುವರಿಸುವ ಅವಕಾಶವಿದೆ.
* ಸಂಘರ್ಷ ಅಂತ್ಯಗೊಂಡ 7 ದಿನಗಳೊಳಗೆ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಲೆಬನಾನ್ನಿಂದ ಹಿಂದೆ ಸರಿಯಬೇಕು ಮತ್ತು ಲೆಬನಾನ್ ಸಶಸ್ತ್ರ ಪಡೆ(ಎಲ್ಎಎಫ್) ಇಲ್ಲಿ ನಿಯೋಜನೆಗೊಳ್ಳುತ್ತದೆ. ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳು ಈ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿಕೊಡಲಿದೆ.
* ಅಂತಿಮವಾಗಿ ಇಸ್ರೇಲ್ ನ ಗಡಿಯಲ್ಲಿ 10,000 ಎಲ್ಎಎಫ್ ಪಡೆಗಳಿರುತ್ತವೆ.
* 60 ದಿನಗಳ ಆರಂಭಿಕ ಅವಧಿಯ ಬಳಿಕ ಗಡಿ ವಿವಾದ ಇತ್ಯರ್ಥ ಹಾಗೂ ವಿಶ್ವಸಂಸ್ಥೆಯ ನಿರ್ಣಯ ಸಂಖ್ಯೆ 1701ರ ಪೂರ್ಣ ಪ್ರಮಾಣದ ಅನುಷ್ಠಾನಕ್ಕಾಗಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಅಮೆರಿಕದ ಮೂಲಕ ಪರೋಕ್ಷ ಮಾತುಕತೆ ಆರಂಭವಾಗುತ್ತದೆ.
* ಅಂತರಾಷ್ಟ್ರೀಯ ನಿಗಾ ಮತ್ತು ಜಾರಿ ವ್ಯವಸ್ಥೆ(ಐಎಂಇಎಂ) ಸ್ಥಾಪನೆ. ಅಮೆರಿಕದ ಅಧ್ಯಕ್ಷತೆಯ ಸಂಸ್ಥೆಯಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್, ಬ್ರಿಟನ್, ಯುಎನ್ಐಎಫ್ಐಎಲ್ ಮತ್ತು ಪ್ರಾದೇಶಿಕ ರಾಷ್ಟ್ರಗಳು ಸದಸ್ಯರಾಗಿರುತ್ತಾರೆ.
* ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದನ್ನು ಅಥವಾ ಪಡೆಯುವುದನ್ನು ಲೆಬನಾನ್ ಅಥವಾ ಐಎಂಇಎಂ ತಡೆಯಲು ವಿಫಲವಾದಲ್ಲಿ ಅಮೆರಿಕದ ಜತೆ ಸಮಾಲೋಚನೆ ನಡೆಸಿ ಅಂತಹ ಗುರಿಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು.
* ಒಪ್ಪಂದದ ಉಲ್ಲಂಘನೆಯ ವಿರುದ್ಧ ಕಾರ್ಯ ನಿರ್ವಹಿಸುವ ಆಯ್ಕೆ ಇಸ್ರೇಲ್ ಗೆ ಇರುತ್ತದೆ.
ಆದರೆ ಈ ಒಪ್ಪಂದದ ಬಗ್ಗೆ ಚರ್ಚಿಸಲು ಅಮೆರಿಕದ ರಾಯಭಾರಿಗಳಾದ ಅಮೋಸ್ ಹೊಚೆಸ್ಟಿನ್ ಮತ್ತು ಬ್ರೆಟ್ ಮೆಕ್ಗರ್ಕ್ ಇಸ್ರೇಲ್ ಗೆ ಆಗಮಿಸುವ ಮುನ್ನವೇ ಇಸ್ರೇಲ್ ನ `ದಿ ಕಾನ್' ಟಿವಿ ಮಾಧ್ಯಮದಲ್ಲಿ ಈ ಕರಡು ಯೋಜನೆಯ ವಿವರಗಳು ಪ್ರಸಾರವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್ `ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವರದಿಗಳು ಹಾಗೂ ಕರಡು ಯೋಜನೆಗಳ ವಿವರ ಪ್ರಸಾರವಾಗುತ್ತಿದೆ. ಅವು ಮಾತುಕತೆಯ ಪ್ರಸ್ತುತ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ' ಎಂದಿದ್ದಾರೆ.