ಲೆಬನಾನ್ ಗಡಿಯಲ್ಲಿ ದಾಳಿಗೆ ಇಸ್ರೇಲ್ ಯೋಜನೆ : ವರದಿ
► ಹಿಜ್ಬುಲ್ಲಾ ವಿರುದ್ಧ ದಾಳಿ ತೀವ್ರಗೊಳಿಸಲು ಹೆಚ್ಚಿದ ಒತ್ತಡ
ಸಾಂದರ್ಭಿಕ ಚಿತ್ರ | Photo : PTI
ಜೆರುಸಲೆಮ್: ಲೆಬನಾನ್ ಜತೆಗಿನ ಉತ್ತರದ ಗಡಿಯಲ್ಲಿ ಇಸ್ರೇಲ್ ಆಕ್ರಮಣಕ್ಕೆ ಸನ್ನದ್ಧವಾಗಿದೆ ಮತ್ತು ಈ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಇಸ್ರೇಲ್ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಉತ್ತರದಲ್ಲಿ ಆಕ್ರಮಣಕ್ಕೆ ಮುನ್ನಡೆಯಲು ಸಿದ್ಧಗೊಂಡಿದ್ದು ಇದಕ್ಕಾಗಿ ಅತ್ಯುತ್ತಮ ತರಬೇತಿ ಒದಗಿಸಲಾಗಿದೆ. ಆಕ್ರಮಣ ಆರಂಭಿಸುವ ಬಗ್ಗೆ ಶೀಘ್ರ ನಿರ್ಧರಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹೆರ್ಝಿ ಹಲೆವಿ ಹೇಳಿದ್ದಾರೆ.
ಸಂಘರ್ಷವನ್ನು ವಿಸ್ತರಿಸಲು ತಾನು ಪ್ರಯತ್ನಿಸುತ್ತಿಲ್ಲ. ಆದರೆ ತಮ್ಮ ಮೇಲೆ ಹೇರಲಾಗುವ ಯಾವುದೇ ಯುದ್ಧವನ್ನು ಎದುರಿಸಲು ಸಿದ್ಧ ಎಂದು ಹಿಜ್ಬುಲ್ಲಾದ ಉಪ ಮುಖಂಡ ಶೇಖ್ ನಯೀಮ್ ಖಾಸೆಮ್ರನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ.
ಲೆಬನಾನ್ನಲ್ಲಿ ನೆಲೆಹೊಂದಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲದ ಸಂಘರ್ಷ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿದೆ. 2006ರಿಂದ ಎರಡೂ ಪಡೆಯ ನಡುವೆ ಸಂಘರ್ಷ ನಡೆಯುತ್ತಿದ್ದು ಇದರಿಂದಾಗಿ ಗಡಿಭಾಗದ ಎರಡೂ ಬದಿಯಲ್ಲಿನ ಸಾವಿರಾರು ಜನರು ನೆಲೆ ಕಳೆದುಕೊಳ್ಳುವಂತಾಗಿದೆ. ಫೆಲೆಸ್ತೀನ್ನ ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್ನ ಮಿತ್ರನಾಗಿರುವ ಹಿಜ್ಬುಲ್ಲಾ, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಬಾಂಬ್ದಾಳಿಯನ್ನು ವಿರೋಧಿಸಿ ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದು ಗಾಝಾದಲ್ಲಿ ಇಸ್ರೇಲ್ನ ಆಕ್ರಮಣ ನಿಂತರೆ ತಾನೂ ದಾಳಿಯನ್ನು ನಿಲ್ಲಿಸುತ್ತೇನೆ ಎಂದು ಹಿಜ್ಬುಲ್ಲಾ ಹೇಳಿದೆ.
ಈ ಪ್ರದೇಶದಲ್ಲಿ ಯುದ್ಧವು ಸಮರ್ಥನೀಯ ವಾಸ್ತವವಲ್ಲ. ಉತ್ತರದ ಗಡಿಭಾಗದಿಂದ ಸ್ಥಳಾಂತರಗೊಂಡಿರುವ ಸವಿರಾರು ಇಸ್ರೇಲಿಯನ್ನರನ್ನು ಮರಳಿ ಮನೆ ತಲುಪಿಸಲು ನಾವು ಬದ್ಧರಾಗಿದ್ದೇವೆ. ಇದನ್ನು ಬಲಪ್ರಯೋಗದಿಂದ ಸಾಧಿಸುವುದೇ ಅಥವಾ ರಾಜತಾಂತ್ರಿಕ ಕ್ರಮಗಳ ಮೂಲಕವೇ ಎಂಬುದನ್ನು ಹಿಜ್ಬುಲ್ಲಾ ನಿರ್ಧರಿಸಬೇಕು. ನಾವು ಈ ದೇಶವನ್ನು ರಕ್ಷಿಸುತ್ತಿದ್ದೇವೆ ಮತ್ತು ನಮ್ಮ ಪ್ರತಿಕ್ರಮಗಳ ಬಗ್ಗೆ ಯಾರೂ ಆಶ್ಚರ್ಯಪಡಬೇಕಿಲ್ಲ ಎಂದು ಇಸ್ರೇಲ್ ಸರಕಾರದ ವಕ್ತಾರ ಡೇವಿಡ್ ಮೆನ್ಸರ್ ಹೇಳಿದ್ದಾರೆ.
ನಮ್ಮ ಭೂಮಿಯ ಮೇಲೆ ಆಕ್ರಮಣ ನಡೆದು ಜನರನ್ನು ತೆರವುಗೊಳಿಸುತ್ತಿರುವಾಗ ಲೆಬನಾನ್ನಲ್ಲೂ ಶಾಂತಿ ಇರಬಾರದು. ನಾವು ದಾಳಿಯನ್ನು ತೀವ್ರಗೊಳಿಸಿ ಹಿಜ್ಬುಲ್ಲಾಗಳನ್ನು ನಾಶಗೊಳಿಸಬೇಕು ಎಂದು ಇಸ್ರೇಲ್ನ ಬಲಪಂಥೀಯ ಸಚಿವರಾದ ಇಟಮರ್ ಬೆನ್ಗ್ವಿವರ್ ಮತ್ತು ಬೆಝಾಲೆಲ್ ಸ್ಮೊಟ್ರಿಚ್ ಆಗ್ರಹಿಸಿದ್ದಾರೆ. ಈ ಮಧ್ಯೆ, ನಿರಂತರ ಎರಡನೇ ದಿನ ಇಸ್ರೇಲ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ಇಸ್ರೇಲ್ ಅಕ್ಟೋಬರ್ 7ರ ಬಳಿಕ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾಗಳ 300 ಸದಸ್ಯರು ಮತ್ತು ಸುಮಾರು 80 ನಾಗರಿಕರು ಹತರಾಗಿದ್ದಾರೆ. ಇಸ್ರೇಲ್ ಮೇಲೆ ಲೆಬನಾನ್ ಕಡೆಯಿಂದ ನಡೆದ ದಾಳಿಯಲ್ಲಿ 18 ಯೋಧರು ಮತ್ತು 10 ನಾಗರಿಕರು ಹತರಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಹಿಜ್ಬುಲ್ಲಾ ಜತೆಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಬೆಂಬಲವಿಲ್ಲ : ಅಮೆರಿಕ
ಹಿಜ್ಬುಲ್ಲಾ ಜತೆಗೆ ಇಸ್ರೇಲ್ನ ಪೂರ್ಣ ಪ್ರಮಾಣದ ಯುದ್ಧವನ್ನು ಅಮೆರಿಕ ಬೆಂಬಲಿಸುವುದಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಬುಧವಾರ ಹೇಳಿದ್ದಾರೆ. ಆದರೆ ಹಿಜ್ಬುಲ್ಲಾದ ದಾಳಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್ಗೆ ಹಕ್ಕು ಇದೆ. ರಾಜತಾಂತ್ರಿಕ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಇಸ್ರೇಲ್ ಮುಖಂಡರು ಹೇಳುತ್ತಿದ್ದರು. ಖಂಡಿತವಾಗಿಯೂ ನಮ್ಮ ಆದ್ಯತೆಯೂ ಇದೇ ಆಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸಲಿದ್ದೇವೆ ಎಂದವರು ಹೇಳಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ ಭೂಗಡಿ ಒಪ್ಪಂದ ಹಂತಗಳಲ್ಲಿ ಜಾರಿಗೆ ಬಂದರೆ ಸಂಘರ್ಷವನ್ನು ತಗ್ಗಿಸಬಹುದು ಎಂದು ಅಮೆರಿಕ ಅಧ್ಯಕ್ಷರ ಸಲಹೆಗಾರ ಅಮೋಚ್ ಹೊಚ್ಸ್ಟೈನ್ ಹೇಳಿದ್ದಾರೆ.