ಇಸ್ರೇಲ್: ಗಾಝಾ ಯುದ್ಧಾರಂಭದ ಬಳಿಕ ಮೊದಲ ಬಾರಿಗೆ ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ
Photo: twitter.com/MailOnline
ಜೆರುಸಲೇಂ: ಕಳೆದ ಅಕ್ಟೋಬರ್ ನಲ್ಲಿ ಇಸ್ರೇಲ್ ಸರ್ಕಾರ ಹಮಾಸ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಇಸ್ರೇಲ್ ನಲ್ಲಿ ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ ಭಾನುವಾರ ನಡೆಯಿತು. ಗಾಝಾದಲ್ಲಿ ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವವರ ಬಿಡುಗಡೆಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ದೇಶದಲ್ಲಿ ಶೀಘ್ರ ಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಮಾಸ್ ಸರ್ವನಾಶ ಮಾಡುತ್ತೇನೆ ಮತ್ತು ಎಲ್ಲ ಒತ್ತೆಯಾಳುಗಳನ್ನು ಕರೆ ತರುತ್ತೇವೆ ಎಂದು ಪ್ರಧಾನಿ ನೆತನ್ಯಾಹು ಭರವಸೆ ನೀಡಿದ್ದರು. ಆದರೆ ಈ ಭರವಸೆಗಳು ಮರೀಚಿಕೆಯಾಗಿವೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಹಮಾಸ್ ಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದರೂ, ಅದು ಅಚಲವಾಗಿಯೇ ಉಳಿದಿದೆ. ಸೇನಾ ಸೇವೆಗಳ ಹೊರೆಯಲ್ಲಿ ಸಮಾನ ಪಾಲು ಅಗತ್ಯವಿದೆ ಎಂದೂ ಪ್ರತಿಭಟನಾಕಾರರು ಪ್ರತಿಪಾದಿಸಿದರು. ಅಕ್ಟೋಬರ್ 7ರಂದು ಗಾಝಾದಲ್ಲಿ ಯುದ್ಧ ಆರಂಭವಾದ ಬಳಿಕ 600ಕ್ಕೂ ಹೆಚ್ಚು ಮಂದಿ ಸೈನಿಕರು ಮೃತಪಟ್ಟಿದ್ದು, ಇತ್ತೀಚಿನ ರ್ಷಗಳಲ್ಲಿ ನಡೆದ ಗರಿಷ್ಠ ಸಾವು ಇದಾಗಿದೆ.
ಸಾವಿರಾರು ಮಂದಿ ಪ್ರತಿಭಟನಾಕಾರರು, ತಕ್ಷಣ ಚುನಾವಣೆ ನಡೆಸಿ ಎಂದು ಘೋಷಣೆಗಳನ್ನು ಕೂಗಿದರು. ಹಮಾಸ್ ದಾಳಿಯ ವೇಳೆ ಭದ್ರತಾ ವೈಫಲ್ಯದ ಬಗ್ಗೆಯೂ ನೆತನ್ಯಾಹು ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.