ಗಾಝಾದ ಮೇಲೆ ಪರಮಾಣು ಬಾಂಬ್ ದಾಳಿ ಮಾಡುವ ಆಯ್ಕೆಯೂ ನಮ್ಮ ಮುಂದಿದೆ ಎಂದ ಇಸ್ರೇಲ್ ಸಚಿವ ಎಲಿಯಾಹು!
ಹೇಳಿಕೆಗೆ, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರಕಾರದಿಂದ ಎಲಿಯಾಹು ಅಮಾನತು
(Photo credit: X/Mario Nawfal and AP)
ಟೆಲ್ಅವೀವ್ : ಗಾಝಾದ ಮೇಲೆ ಪರಮಾಣು ಬಾಂಬ್ ದಾಳಿ ಇಸ್ರೇಲ್ ಎದುರಿಗೆ ಇರುವ ಆಯ್ಕೆಗಳಲ್ಲಿ ಒಂದಾಗಿದೆ. ಪರಮಾಣು ಬಾಂಬ್ ದಾಳಿಯೂ ಒಂದು ಸಾಧ್ಯತೆ ಯಾಗಿದೆ ಎಂದು ಇಸ್ರೇಲ್ ನ ಸಾಂಸ್ಕೃತಿಕ ಪರಂಪರೆ ಇಲಾಖೆಯ ಸಚಿವ ಅಮಿಹೆಯ್ ಎಲಿಯಾಹು ಹೇಳಿದ್ದಾರೆ.
ಸ್ಥಳೀಯ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಎಲಿಯಾಹು, ‘ಅಗತ್ಯಬಿದ್ದರೆ ಪರಮಾಣು ಬಾಂಬ್ ದಾಳಿಯ ಆಯ್ಕೆಯೂ ನಮ್ಮೆದುರು ಇದೆ. ಗಾಝಾದಲ್ಲಿ ಯಾವುದೇ ಹೋರಾಟಗಾರರಿಲ್ಲ’ ಎಂದಿದ್ದಾರೆ. ‘ಗಾಝಾ ಪಟ್ಟಿಗೆ ಮಾನವೀಯ ನೆರವು ಒದಗಿಸುವುದಕ್ಕೆ ತಮ್ಮ ಆಕ್ಷೇಪವಿದೆ. ಇದು ನಿಜಕ್ಕೂ ಒಂದು ವಿಫಲ ಪ್ರಯತ್ನ. ನಾಝಿಗಳಿಗೆ ನಾವು ಮಾನವೀಯ ನೆರವನ್ನು ಹಸ್ತಾಂತರಿಸುವುದಿಲ್ಲ. ಗಾಝಾದಲ್ಲಿ ಸಿಕ್ಕಿಬಿದ್ದಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ಸೂಕ್ತ ರೀತಿಯಲ್ಲಿ ಕರೆತರಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಇಸ್ರೇಲ್ ದೇಶ ಬದ್ಧವಾಗಿದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ತಮ್ಮ ಹೇಳಿಕೆಯ ಬಗ್ಗೆ ವ್ಯಾಪಕ ಟೀಕೆ, ವಿರೋಧ, ಖಂಡನೆ ವ್ಯಕ್ತವಾದ ಬಳಿಕ ಸ್ಪಷ್ಟನೆ ನೀಡಿರುವ ಎಲಿಯಾಹು ‘ ಪರಮಾಣು ಬಾಂಬ್ ಕುರಿತ ಹೇಳಿಕೆಯು ಒಂದು ರೂಪಕವಾಗಿದೆ ಎಂಬುದು ಸಾಮಾನ್ಯ ಜ್ಞಾನ ಹೊಂದಿರುವವರಿಗೆ ಅರ್ಥವಾಗುತ್ತದೆ. ಆದರೂ, ಹಮಾಸ್ ಗೆ ಬಲವಾದ ಮತ್ತು ಅಸಮಾನವಾದ ಪ್ರತಿಕ್ರಿಯೆ ಖಂಡಿತಾ ಅಗತ್ಯವಿದೆ. ಇಂತಹ ಪ್ರತಿಕ್ರಿಯೆಯು ಯೋಗ್ಯವಲ್ಲ ಎಂಬುದನ್ನು ನಾಝಿಗಳಿಗೆ ಮತ್ತವರ ಬೆಂಬಲಿಗರಿಗೆ ಸ್ಪಷ್ಟಪಡಿಸುತ್ತದೆ’ ಎಂದಿದ್ದಾರೆ. ಗಾಝಾ ಪಟ್ಟಿಯ ಪ್ರದೇಶವನ್ನು ಮರುಸ್ವಾಧೀನ ಪಡಿಸಿಕೊಳ್ಳುವುದು ಮತ್ತು ಅಲ್ಲಿ ವಸಾಹತುಗಳನ್ನು ಮರುಸ್ಥಾಪಿಸುವುದನ್ನು ಬೆಂಬಲಿಸಿರುವ ಅವರು, ಗಾಝಾದಲ್ಲಿನ ಫೆಲೆಸ್ತೀನ್ ನಾಗರಿಕರ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ‘ ಅವರು ಐರ್ಲ್ಯಾಂಡ್ ಅಥವಾ ಮರುಭೂಮಿಗೆ ಹೋಗಬಹುದು. ಇದಕ್ಕೆ ಗಾಝಾದಲ್ಲಿನ ರಾಕ್ಷಸರು ಸ್ವತಃ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಉತ್ತರಿಸಿದ್ದಾರೆ. ಉತ್ತರ ಗಾಝಾ ಪಟ್ಟಿ ಅಸ್ತಿತ್ವದಲ್ಲಿರಲು ಯಾವುದೇ ಹಕ್ಕನ್ನು ಹೊಂದಿಲ್ಲ. ಹಮಾಸ್ ಅಥವಾ ಫೆಲೆಸ್ತೀನಿಯನ್ ಧ್ವಜವನ್ನು ಬೀಸುವವರು ಭೂಮಿಯ ಮೇಲೆ ಬದುಕಿರಬಾರದು ಎಂದು ಎಲಿಯಾಹು ಹೇಳಿರುವುದಾಗಿ ವರದಿಯಾಗಿದೆ.
ಸಚಿವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅವರನ್ನು ಸಚಿವ ಸಂಪುಟದಿಂದ ಅಮಾನತುಗೊಳಿಸಲಾಗಿದೆ. ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ಗ್ವಿವರ್ ಅವರ ಬಲಪಂಥೀಯ ಪಕ್ಷದ ಸದಸ್ಯ ಎಲಿಯಾಹು ಯುದ್ಧಕಾಲದ ನಿರ್ಧಾರಗಳನ್ನು ತೆಗೆದುಕೊಳ್ಳುವ ಭದ್ರತಾ ಸಂಪುಟದ ಭಾಗವಾಗಿಲ್ಲ ಮತ್ತು ಹಮಾಸ್ ವಿರುದ್ಧದ ಯುದ್ಧವನ್ನು ನಿರ್ದೇಶಿಸುವ ಯುದ್ಧಸಂಪುಟದ ಮೇಲೆ ಅಧಿಕಾರವನ್ನು ಹೊಂದಿಲ್ಲ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ದಿ ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.
ವಿಪಕ್ಷ ಮುಖಂಡ ಯಾಯಿರ್ ಲ್ಯಾಪಿಡ್ ಅವರೂ ಹೇಳಿಕೆಯನ್ನು ಖಂಡಿಸಿದ್ದು ‘ಇದು ಬೇಜವಾಬ್ದಾರಿ ಸಚಿವರ ಭಯಾನಕ ಮತ್ತು ಹುಚ್ಚುತನದ ಹೇಳಿಕೆಯಾಗಿದೆ. ಅವರು ಬಂಧಿತರ ಕುಟುಂಬದವರ, ಇಸ್ರೇಲ್ ಸಮಾಜದವರ ವಿರುದ್ಧ ಅಪರಾಧ ಎಸಗಿದ್ದಾರೆ ಮತ್ತು ನಮ್ಮ ಅಂತರ್ರಾಷ್ಟ್ರೀಯ ನಿಲುವಿಗೆ ಧಕ್ಕೆ ತಂದಿದ್ದಾರೆ. ಸರಕಾರದಲ್ಲಿ ತೀವ್ರವಾದಿಗಳ ಉಪಸ್ಥಿತಿಯು ನಮಗೆ ಅಪಾಯವುಂಟು ಮಾಡುತ್ತದೆ ಮತ್ತು ಯುದ್ಧದ ಗುರಿಗಳನ್ನು ತಲುಪಲು ತೊಡಕಾಗಲಿದೆ ’ ಎಂದು ಪ್ರತಿಕ್ರಿಯಿಸಿದ್ದಾರೆ.
ಎಲಿಯಾಹು ಅವರ ಹೇಳಿಕೆ ಆಧಾರರಹಿತವಾಗಿದೆ. ಇಂತಹ ಜನರು ಇಸ್ರೇಲ್ ನ ಭದ್ರತೆಯ ಉಸ್ತುವಾರಿ ವಹಿಸಿಲ್ಲ ಎಂಬುದು ಉತ್ತಮ ವಿಷಯವಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಟ್ವೀಟ್ ಮಾಡಿದ್ದಾರೆ.
ಎಲಿಯಾಹು ಅಮಾನತು:
ಗಾಝಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕುವ ಸಾಧ್ಯತೆಯೂ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸ್ಕೃತಿ ಮತ್ತು ಪರಂಪರೆ ಇಲಾಖೆಯ ಸಚಿವ ಅಮಿಹೆಯ್ ಎಲಿಯಾಹುರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದಿಂದ ಅಮಾನತುಗೊಳಿಸಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ. ಎಲಿಯಾಹು ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಸರಕಾರ ‘ಇಸ್ರೇಲ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳು ಅಮಾಯಕರಿಗೆ ಹಾನಿಯಾಗದಂತೆ ಅಂತರ್ರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದೆ. ‘ಎಲಿಯಾಹು ಹೇಳಿಕೆ ವಾಸ್ತವವನ್ನು ಆಧರಿಸಿಲ್ಲ. ಈ ಆಧಾರರಹಿತ ಹೇಳಿಕೆಗಾಗಿ ಅವರನ್ನು ಸರಕಾರದಿಂದ ಅಮಾನತುಗೊಳಿಸಲಾಗಿದೆ’ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.