ಇಸ್ರೇಲ್ ಗಾಝಾವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಬಾರದು: ಅಮೆರಿಕ
ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕೆನ್ (AP/PTI)
ಟೋಕಿಯೊ: ಹಮಾಸ್ ಜತೆಗಿನ ಯುದ್ಧ ಅಂತ್ಯಗೊಂಡ ಬಳಿಕ ಇಸ್ರೇಲ್ ಗಾಝಾವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಬಾರದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಆಗ್ರಹಿಸಿದ್ದಾರೆ.
ಜಪಾನ್ನಲ್ಲಿ ಜಿ7 ಗುಂಪಿನ ವಿದೇಶಾಂಗ ಸಚಿವರ ಸಭೆಯ ಬಳಿಕ ಸುದ್ಧಿಗಾರರ ಜತೆ ಮಾತನಾಡಿದ ಅವರು ಬಾಳಿಕೆ ಬರುವ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸುವ ಸಲುವಾಗಿ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು. `ಈಗಷ್ಟೇ ಅಲ್ಲ, ಮುಂದಿನ ದಿನಗಳಲ್ಲೂ ಗಾಝಾದಿಂದ ಫೆಲೆಸ್ತೀನೀಯರನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು. ಭಯೋತ್ಪಾದನೆ ಅಥವಾ ಹಿಂಸಾತ್ಮಕ ದಾಳಿಗೆ ವೇದಿಕೆಯಾಗಿ ಗಾಝಾವನ್ನು ಬಳಸಬಾರದು. ಘರ್ಷಣೆ ಮುಗಿದ ಬಳಿಕ ಗಾಝಾವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಬಾರದು, ಗಾಝಾಕ್ಕೆ ಮುತ್ತಿಗೆ ಹಾಕುವ ಅಥವಾ ನಿರ್ಬಂಧ ಹೇರುವ ಪ್ರಯತ್ನ ನಡೆಯಬಾರದು ಎಂಬ ಅಂಶವನ್ನು ನಾವು ಮುಂದಿರಿಸಿದ್ದೇವೆ' ಎಂದು ಬ್ಲಿಂಕೆನ್ ಹೇಳಿದ್ದಾರೆ.
`ಗಾಝಾದಲ್ಲಿ ಮಾನವೀಯ ವಿರಾಮ ಮತ್ತು ಕಾರಿಡಾರ್ಗಳನ್ನು ಬೆಂಬಲಿಸುತ್ತೇವೆ. ನಾಗರಿಕರಿಗೆ ಅಡೆತಡೆಯಿಲ್ಲದ ಮಾನವೀಯ ಬೆಂಬಲವನ್ನು ನೀಡುವುದು ಎಲ್ಲರ ಹೊಣೆಯಾಗಿದೆ ' ಎಂದು ಜಿ7 ವಿದೇಶಾಂಗ ಸಚಿವರ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.