ಪೂರ್ಣ ಕದನ ವಿರಾಮ, ಹೊಸ ಗಾಝಾ ಪ್ರಸ್ತಾವನೆ ಮುಂದಿಟ್ಟ ಇಸ್ರೇಲ್: ಬೈಡನ್
ವಾಷಿಂಗ್ಟನ್: ಗಾಝಾದಲ್ಲಿ ಖಾಯಂ ಶಾಂತಿ ನೆಲೆಸುವ ನಿಟ್ಟಿನಲ್ಲಿ ಮಾರ್ಗಸೂಚಿಯ ಪ್ರಸ್ತಾವವನ್ನು ಇಸ್ರೇಲ್ ಶುಕ್ರವಾರ ಮುಂದಿಟ್ಟಿದ್ದು, ಯುದ್ಧ ಕೊನೆಗೊಳ್ಳುವ ಹಂತದಲ್ಲಿ ಈ ಅಚ್ಚರಿಯ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಸಂಘಟನೆಯನ್ನು ಆಗ್ರಹಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಎಂಟು ತಿಂಗಳ ಸಂಘರ್ಷಕ್ಕೆ ಪರಿಹಾರ ಒದಗಿಸುವ ಮೊದಲ ಸೂತ್ರ ಇದಾಗಿದ್ದು, ಆರು ವಾರಗಳಲ್ಲಿ ಹಂತ ಹಂತವಾಗಿ ಗಾಝಾದ ಎಲ್ಲ ಜನನಿಬಿಡ ಪ್ರದೇಶಗಳಿಂದ ಇಸ್ರೇಲ್ ಪಡೆಗಳನ್ನು ವಾಪಾಸು ಪಡೆಯುವ ಸೂತ್ರವನ್ನು ಪ್ರಸ್ತಾವಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಇದು ಯುದ್ಧ ಅಂತ್ಯಗೊಳ್ಳಬೇಕಾದ ಸಮಯ" ಎಂದು ಅವರು ಟೆಲಿವಿಷನ್ ಭಾಷಣದಲ್ಲಿ ಹೇಳಿದ್ದು, ಶಾಂತಿ ಸ್ಥಾಪಿಸುವ ಅವಕಾಶದ ಈ ಕ್ಷಣವನ್ನು ನಾವು ಕಳೆದುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇಸ್ರೇಲ್ ಸಮಗ್ರ ಹೊಸ ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ಕದನವಿರಾಮ ಹಾಗೂ ಎಲ್ಲ ಒತ್ತೆಯಾಳುಗಳ ಬಿಡುಗಡೆಯ ಮಾರ್ಗಸೂಚಿಯಾಗಿದೆ ಎಂದು ವಿವರಿಸಿರುವ ಬೈಡನ್, ಹಮಾಸ್ ಮೇಲೆ ಈ ಸಂಬಂಧ ಒತ್ತಡ ಹಾಕಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸುವ ಮೂಲಕ ಗಾಜಾದಲ್ಲಿ ಸಂಘರ್ಷ ಆರಂಭವಾಗಿತ್ತು.