ಫೆಲೆಸ್ತೀನಿಯರು ಗಾಝಾ ತೊರೆಯುವ ಯೋಜನೆ ರೂಪಿಸಲು ಇಸ್ರೇಲ್ ಸೇನೆಗೆ ಸೂಚನೆ!
ಸಾಂದರ್ಭಿಕ ಚಿತ್ರ | PC : PTI
ಜೆರುಸಲೇಂ: ಯುದ್ಧದಿಂದ ಜರ್ಜರಿತ ಗಾಝಾದಿಂದ ಬೃಹತ್ ಸಂಖ್ಯೆಯಲ್ಲಿ ಫೆಲೆಸ್ತೀನೀಯರು ನಿರ್ಗಮಿಸಲು ಸೂಕ್ತವಾದ ಯೋಜನೆಯನ್ನು ಸಿದ್ಧಪಡಿಸುವಂತೆ ಇಸ್ರೇಲ್ ಸೇನೆಗೆ ಸೂಚಿಸಲಾಗಿದೆ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಗುರುವಾರ ಹೇಳಿದ್ದಾರೆ.
`ಯೋಜನೆಯು ಗಡಿದಾಟು(ಬೋರ್ಡರ್ ಕ್ರಾಸಿಂಗ್)ಗಳಲ್ಲಿ ನಿರ್ಗಮಿಸುವ ಆಯ್ಕೆ ಮತ್ತು ಸ್ವಾತಂತ್ರವನ್ನು ಹಾಗೂ ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ನಿರ್ಗಮಿಸುವ ಆಯ್ಕೆಯನ್ನೂ ಹೊಂದಿರಲಿದೆ' ಎಂದವರು ಹೇಳಿದ್ದಾರೆ.
ಗಾಝಾದ ಹೆಚ್ಚಿನ ಜನಸಂಖ್ಯೆಯನ್ನು ವಿಶ್ವದ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸುವ ಟ್ರಂಪ್ ಅವರ ದಿಟ್ಟ ಯೋಜನೆಯನ್ನು ಇಸ್ರೇಲ್ ಸ್ವಾಗತಿಸುತ್ತದೆ. ಗಾಝಾದ ಯಾವುದೇ ನಿವಾಸಿ ಅಲ್ಲಿಂದ ನಿರ್ಗಮಿಸಲು ಅವಕಾಶ ನೀಡುವ ಮತ್ತು ಅವರನ್ನು ಸ್ವೀಕರಿಸಲು ಯಾವುದೇ ದೇಶಕ್ಕೆ ಅವಕಾಶ ನೀಡುವ ಯೋಜನೆ ಸಿದ್ಧಪಡಿಸಲು ಇಸ್ರೇಲ್ ಪಡೆಗೆ ತಿಳಿಸಲಾಗಿದೆ' ಎಂದವರು ಹೇಳಿದ್ದಾರೆ.
ಯಾವ ದೇಶ ಫೆಲೆಸ್ತೀನೀಯರನ್ನು ಸ್ವೀಕರಿಸಬೇಕು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಟ್ಝ್ ` ಗಾಝಾದಲ್ಲಿ ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಯನ್ನು ಟೀಕಿಸಿದ ದೇಶಗಳು' ಎಂದರು. ಇಸ್ರೇಲ್ ನ ಕಾರ್ಯಾಚರಣೆಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಸ್ಪೈನ್, ಐರ್ಲ್ಯಾಂಡ್, ನಾರ್ವೆ ಇತ್ಯಾದಿ ದೇಶಗಳು ಗಾಝಾ ನಿವಾಸಿಗಳು ತಮ್ಮ ದೇಶದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುವ ಬದ್ಧತೆ ಹೊಂದಿದೆ' ಎಂದು ಕಟ್ಝ್ ಪ್ರತಿಪಾದಿಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28