ಗಾಝಾದಿಂದ ಸಾವಿರಾರು ಸೈನಿಕರನ್ನು ಹಿಂಪಡೆದ ಇಸ್ರೇಲ್
Image Source : PTI
ಟೆಲ್ ಅವೀವ್: ಗಾಝಾ ಪ್ರದೇಶದ ಪ್ರಮುಖ ದಕ್ಷಿಣದ ನಗರದಲ್ಲಿ ಯುದ್ಧ ಕೇಂದ್ರೀಕೃತ ಆಗಿರುವುದರಿಂದ ಇಸ್ರೇಲ್ ಗಾಝಾದಿಂದ ಸಾವಿರಾರು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಸೇನೆ ಸೋಮವಾರ ಹೇಳಿಕೆ ನೀಡಿದೆ.
ಉತ್ತರಾರ್ಧದಲ್ಲಿ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದ್ದು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಸಮಯ ಹತ್ತಿರದಲ್ಲಿರುವುದರಿಂದ ಕೆಲವು ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ ಗಾಝಾದ ಇತರ ಪ್ರದೇಶಗಳಲ್ಲಿ, ವಿಶೇಷವಾಗಿ ದಕ್ಷಿಣದ ಖಾನ್ಯೂನಿಸ್ ಮತ್ತು ಕೇಂದ್ರ ಪ್ರದೇಶಗಳಲ್ಲಿ ಭೀಕರ ಯುದ್ಧ ಮುಂದುವರಿದಿದೆ. ಗಾಝಾವನ್ನು 16 ವರ್ಷದಿಂದ ಆಳುತ್ತಿರುವ ಹಮಾಸ್ ಅನ್ನು ನಿರ್ಮೂಲನೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಇಸ್ರೇಲ್ ಘೋಷಿಸಿದೆ. ಅಮೆರಿಕದ ವಿದೇಶಾಂಗ ಸಚಿವ ಅಂಥೋನಿ ಬ್ಲಿಂಕೆನ್ ಗಾಝಾ ಪ್ರದೇಶಕ್ಕೆ ಭೇಟಿ ನೀಡಲಿರುವ ಸಂದರ್ಭದಲ್ಲೇ ಇಸ್ರೇಲ್ ಗಾಝಾದಿಂದ ಸೇನೆ ಹಿಂಪಡೆಯುವುದಾಗಿ ಘೋಷಿಸಿದೆ.
`ಮುಂದಿನ ವಾರ ತರಬೇತಿ ಮತ್ತು ವಿರಾಮದ ಉದ್ದೇಶದಿಂದ 5 ತುಕಡಿಗಳು, ಹಲವು ಸಾವಿರ ಯೋಧರನ್ನು ಗಾಝಾದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಯುದ್ಧದ ಉದ್ದೇಶಗಳಿಗೆ ದೀರ್ಘಾವಧಿಯ ಹೋರಾಟದ ಅಗತ್ಯವಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಸನ್ನದ್ಧರಾಗುತ್ತಿದ್ದೇವೆ' ಎಂದು ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹೆಗಾರಿ ಹೇಳಿದ್ದಾರೆ.
ಈ ಮಧ್ಯೆ, ಖಾನ್ಯೂನಿಸ್ ನಗರದ ಪಶ್ಚಿಮ ಮತ್ತು ಮಧ್ಯಭಾಗದಲ್ಲಿ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಗ್ರಾಮೀಣ ನಿರಾಶ್ರಿತರ ಶಿಬಿರದ ಮೇಲೆಯೂ ವೈಮಾನಿಕ ದಾಳಿ ನಡೆದಿರುವ ವರದಿಯಾಗಿದೆ ಎಂದು `ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್' ವರದಿ ಮಾಡಿದೆ.