ಯುದ್ಧ ಅಂತ್ಯದ ಬಗ್ಗೆ ಹಮಾಸ್ ಷರತ್ತು ತಿರಸ್ಕರಿಸಿದ ಇಸ್ರೇಲ್
ಬೆಂಜಮಿನ್ ನೆತನ್ಯಾಹು | Photo: PTI
ಟೆಲ್ಅವೀವ್: ಗಾಝಾದಿಂದ ಇಸ್ರೇಲ್ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದು ಹಮಾಸ್ನ ಅಧಿಕಾರ ಮುಂದುವರಿಯಲು ಬಿಟ್ಟರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಮುಂದಿರಿಸಿದ ಷರತ್ತುಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ.
ನಮ್ಮ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಯುದ್ಧವನ್ನು ಅಂತ್ಯಗೊಳಿಸಲು, ಗಾಝಾದಿಂದ ನಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು, ಕೊಲೆಗಡುಕರ ಮತ್ತು ಅತ್ಯಾಚಾರಿಗಳನ್ನು ಇಸ್ರೇಲ್ ಜೈಲಿಂದ ಬಿಡುಗಡೆಗೊಳಿಸುವಂತೆ ಮತ್ತು ಹಮಾಸ್ ಆಡಳಿತ ಮುಂದುವರಿಯಲು ಅವಕಾಶ ನೀಡಬೇಕೆಂದು ಹಮಾಸ್ ಷರತ್ತು ವಿಧಿಸಿದೆ. ಆದರೆ ಹಮಾಸ್ ರಾಕ್ಷಸರ ಶರಣಾಗತಿ ಷರತ್ತನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ' ಎಂದು ನೆತನ್ಯಾಹು ಘೋಷಿಸಿದ್ದಾರೆ.
ನೆತನ್ಯಾಹು ಹೇಳಿಕೆಯ ಬೆನ್ನಲ್ಲೇ ದಕ್ಷಿಣ ಗಾಝಾ ಪಟ್ಟಿಯ ಖಾನ್ಯೂನಿಸ್ ನಗರದ ಮೇಲೆ ಇಸ್ರೇಲ್ನ ಬಾಂಬ್ ದಾಳಿ ಮುಂದುವರಿದಿದೆ. `ಗಾಝಾದಲ್ಲಿನ ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸಲು ಇಸ್ರೇಲಿ ಮುಖಂಡನ ನಿರಾಕರಣೆಯು ಇಸ್ರೇಲಿ ಒತ್ತೆಯಾಳುಗಳು ಬಿಡುಗಡೆಗೊಳ್ಳುವ ಯಾವುದೇ ಅವಕಾಶವಿಲ್ಲ ಎಂಬುದನ್ನು ಸೂಚಿಸಿದೆ' ಎಂದು ಹಮಾಸ್ನ ಮೂಲಗಳು ಪ್ರತಿಕ್ರಿಯಿಸಿವೆ.
ಗಾಝಾದಲ್ಲಿ ಹಮಾಸ್ನ ಒತ್ತೆಸೆರೆಯಲ್ಲಿ ಸುಮಾರು 240 ಒತ್ತೆಯಾಳುಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು ಇವರಲ್ಲಿ 100ಕ್ಕೂ ಅಧಿಕ ಒತ್ತೆಯಾಳುಗಳನ್ನು ನವೆಂಬರ್ ಅಂತ್ಯದಲ್ಲಿ ನಡೆದ ಸಂಧಾನ ಮಾತುಕತೆಯ ಪ್ರಕಾರ ಹಮಾಸ್ ಬಿಡುಗಡೆಗೊಳಿಸಿದ್ದು ಪ್ರತಿಯಾಗಿ ಇಸ್ರೇಲ್ನ ಜೈಲಿನಿಂದ 240 ಫೆಲೆಸ್ತೀನೀಯರು ಬಿಡುಗಡೆಗೊಂಡಿದ್ದರು. ಬಳಿಕ ಕದನ ವಿರಾಮ ಮುರಿದು ಬಿದ್ದಿತ್ತು. ಆದರೆ ಉಳಿದ 136 ಒತ್ತೆಯಾಳುಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೆತನ್ಯಾಹು ಸರಕಾರದ ಮೇಲೆ ಒತ್ತೆಯಾಳುಗಳ ಕುಟುಂಬದವರು ಒತ್ತಡ ಹೇರುತ್ತಿದ್ದು ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಈ ಮಧ್ಯೆ, ಜೋರ್ಡಾನ್ ನದಿಯ ಪಶ್ಚಿಮದಲ್ಲಿರುವ ಪ್ರದೇಶದ ಮೇಲೆ ಇಸ್ರೇಲ್ನ ನಿಯಂತ್ರಣವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನೆತನ್ಯಾಹು ಪುನರುಚ್ಚರಿಸಿದ್ದಾರೆ. `ನನ್ನ ಬಿಗಿ ನಿಲುವು ಇಸ್ರೇಲ್ಗೆ ಅಸ್ತಿತ್ವವಾದದ ಅಪಾಯವುಂಟು ಮಾಡುವ ಫೆಲಸ್ತೀನಿಯನ್ ರಾಷ್ಟ್ರದ ಸ್ಥಾಪನೆಯನ್ನು ಇದುವರೆಗೆ ತಡೆಹಿಡಿದಿದೆ. ಅಂತರಾಷ್ಟ್ರೀಯ ಅಥವಾ ಆಂತರಿಕ ಒತ್ತಡವನ್ನು ಎದುರಿಸಿ ಈ ನಿಲುವಿಗೆ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ' ಎಂದು ನೆತನ್ಯಾಹು ಹೇಳಿದ್ದಾರೆ.