ಗಾಝಾ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮುಹಮ್ಮದ್ ದೈಫ್ ಹತ್ಯೆ: ಇಸ್ರೇಲ್
ಮುಹಮ್ಮದ್ ದೈಫ್ | PC : aljazeera.com
ಜೆರುಸಲೇಂ: ಕಳೆದ ತಿಂಗಳು ಗಾಝಾದ ದಕ್ಷಿಣ ಪ್ರದೇಶ ಖಾನ್ ಯೂನಿಸ್ನಲ್ಲಿ ತಾನು ನಡೆಸಿದ್ದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮುಹಮ್ಮದ್ ದೈಫ್ ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆಯು ಗುರುವಾರ ಪ್ರಕಟಿಸಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಜು.13ರಂದು ಖಾನ್ ಯೂನಿಸ್ ಪ್ರದೇಶದ ಮೇಲೆ ವಾಯುದಾಳಿ ನಡೆಸಲಾಗಿದ್ದು, ಮುಹಮ್ಮದ್ ದೈಫ್ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಇಸ್ರೇಲಿ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ದೈಫ್ ಅ.7ರ ಮಾರಣಹೋಮವನ್ನು ರೂಪಿಸಿದ್ದರು ಮತ್ತು ಅದನ್ನು ಕಾರ್ಯಗತಗೊಳಿಸಿದ್ದರು ಎಂದು ಇಸ್ರೇಲಿ ಸೇನೆಯು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯನ್ನು ಉಲ್ಲೇಖಿಸಿ ಹೇಳಿದೆ.
ಜು.13ರಂದು ಖಾನ್ ಯೂನಿಸ್ ಮೇಲೆ ನಡೆದಿದ್ದ ದಾಳಿಯಲ್ಲಿ 90ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಗಾಝಾದಲ್ಲಿಯ ಆರೋಗ್ಯ ಅಧಿಕಾರಿಗಳು ಆಗ ತಿಳಿಸಿದ್ದರು, ಆದರೆ ಮೃತರಲ್ಲಿ ದೈಫ್ ಸೇರಿದ್ದಾರೆ ಎನ್ನುವುದನ್ನು ನಿರಾಕರಿಸಿದ್ದರು.
ದೈಫ್ ತನ್ನ ಕೈಕೆಳಗಿನ ಅಧಿಕಾರಿಯೊಂದಿಗೆ ಆಶ್ರಯ ಪಡೆದಿದ್ದ ಮನೆಯ ಸುತ್ತ ಶಂಕಿತ 900 ಕೆ.ಜಿ. ತೂಕದ ಬಾಂಬ್ ದಾಳಿ ನಡೆಸಲಾಗಿದ್ದು, ಅಲ್ಲಿ ಭಾರೀ ಕುಳಿ ಸೃಷ್ಟಿಯಾಗಿತ್ತು.