ಡಮಾಸ್ಕಸ್ ಮೇಲೆ ಇಸ್ರೇಲ್ ನಿಂದ ದಾಳಿ : ಸಿರಿಯಾ ರಕ್ಷಣಾ ಸಚಿವಾಲಯ
Photo : Reuters
ಬೈರೂತ್/ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯ ನಿಲುಗಡೆ ಪ್ರಯತ್ನದ ಭಾಗವಾಗಿ ಈ ಪ್ರಾಂತ್ಯದಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಪ್ರವಾಸ ಕೈಗೊಂಡಿರುವ ಬೆನ್ನಿಗೇ, ಗುರುವಾರ ಸಿರಿಯಾದ ರಾಜಧಾನಿ ಡಮಾಸ್ಕಸ್ ಹಾಗೂ ಪಶ್ಚಿಮ ಹಾಮ್ಸ್ ನಗರದ ಬಳಿ ಇರುವ ಸೇನಾ ನೆಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ಹೇಳಿದೆ.
ಕೇಂದ್ರ ಡಮಾಸ್ಕಸ್ ನ ನೆರೆಯ ನಗರವಾದ ಕಫ್ರ್ ಸೌಸ ಹಾಗೂ ಹಾಮ್ಸ್ ನಗರದ ಬಳಿ ಇರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ ದಾಳಿಯಲ್ಲಿ ಭೌತಿಕ ಹಾನಿಯಾಗಿದೆ ಎಂದು ಹೇಳಿರುವ ಸಿರಿಯಾ ರಕ್ಷಣಾ ಸಚಿವಾಲಯ, ಈ ಕುರಿತು ವಿಸ್ತೃತ ಮಾಹಿತಿ ನೀಡಿಲ್ಲ. ಇದಕ್ಕೂ ಮುನ್ನ, ಡಮಾಸ್ಕಸ್ ನಲ್ಲಿ ಸ್ಫೋಟಗಳ ಸದ್ದು ಕೇಳಿ ಬರುತ್ತಿದ್ದು, ಇಸ್ರೇಲ್ ದಾಳಿಯಲ್ಲಿ ಕಫ್ರ್ ಸೌಸದಲ್ಲಿನ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ ಎಂದು ಸಿರಿಯಾ ಸರಕಾರಿ ಸ್ವಾಮ್ಯದ ಮಾಧ್ಯಮವು ವರದಿ ಮಾಡಿದೆ.
ಆದರೆ, ದಾಳಿಯ ವರದಿಗಳ ಕುರಿತು ಇಸ್ರೇಲ್ ಎಂದಿನಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.