ಲೆಬನಾನ್| ಇಸ್ರೇಲ್ ನಿಂದ ಭಾರೀ ವೈಮಾನಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಮೇಲೆ ಡ್ರೋನ್ ದಾಳಿ ನಡೆಸಿದ ಹಿಜ್ಬುಲ್ಲಾ
Photo credit:X/@Worldsource24
ಜೆರುಸಲೇಂ : ರವಿವಾರ ಮುಂಜಾನೆ ಇಸ್ರೇಲ್ ದಕ್ಷಿಣ ಲೆಬನಾನ್ ನಲ್ಲಿ ತೀವ್ರವಾದ ವೈಮಾನಿಕ ದಾಳಿ ನಡೆಸಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದು ಹಿಜ್ಬುಲ್ಲಾ ವಿರುದ್ಧ ಯೋಜಿತ ದಾಳಿ ಎನ್ನಲಾಗಿದೆ. ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯು ಗಾಝಾದಲ್ಲಿ ಕದನ ವಿರಾಮ ಘೋಷಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಮತ್ತೆ ಇಸ್ರೇಲ್ ಫೆಲೆಸ್ತೀನ್ ನಡುವಿನ ಸಂಘರ್ಷ ಹೆಚ್ಚಾಗುವ ಭೀತಿ ಉಂಟಾಗಿದೆ.
ಇಸ್ರೇಲ್ ತನ್ನ ಪ್ರದೇಶದ ಮೇಲೆ ದಾಳಿ ನಡೆಸುತ್ತಿದ್ದಂತೆ ಹಿಜ್ಬುಲ್ಲಾ, ಇಸ್ರೇಲ್ ಕಡೆಗೆ ಡ್ರೋನ್, ರಾಕೆಟ್, ಕ್ಷಿಪಣಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳ ಕೊನೆಯಲ್ಲಿ ತನ್ನ ಉನ್ನತ ಕಮಾಂಡರ್ನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಘೋಷಣೆ ಮಾಡಿತ್ತು.
ಉತ್ತರ ಇಸ್ರೇಲ್ನಾದ್ಯಂತ ವಾಯುದಾಳಿ ಸೈರನ್ಗಳು ಕೇಳಿಬಂದಿದೆ ಎನ್ನಲಾಗಿದೆ. ಇಸ್ರೇಲ್ನ ಬೆನ್-ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿಮಾನಗಳನ್ನು ಕೂಡಲೇ ತಿರುಗಿಸಲಾಗಿದೆ. ಟೇಕ್ಆಫ್ಗಳನ್ನು ವಿಳಂಬಗೊಳಿಸಲು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಹಮಾಸ್ ವಿರುದ್ಧ ಇಸ್ರೇಲ್ನ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಈಜಿಪ್ಟ್ ನಲ್ಲಿ ಹೊಸ ಸುತ್ತಿನ ಮಾತುಕತೆಯನ್ನು ಆಯೋಜಿಸುತ್ತಿದೆ. ಈಗ ಇಸ್ರೇಲ್ ನಡೆಸಿರುವ ದಾಳಿಯು ಇಸ್ರೇಲ್ - ಫೆಲೆಸ್ತೀನ್ ನಡುವಿನ ಯುದ್ಧ ಈಗ 11 ನೇ ತಿಂಗಳಿಗೆ ಪ್ರವೇಶಿಸುತ್ತಿರುವಂತೆ ಕದನ ವಿರಾಮ ಮಾತುಕತೆಗೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕದನ ವಿರಾಮ ಉಂಟಾದರೆ ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಹಿಜ್ಬುಲ್ಲಾ ಈಗಾಗಲೇ ಹೇಳಿದೆ.
ನಿಖರ-ಮಾರ್ಗದರ್ಶಿ ಕ್ಷಿಪಣಿಗಳನ್ನು ಒಳಗೊಂಡಂತೆ 150,000 ರಾಕೆಟ್ಗಳು ಮತ್ತು ಕ್ಷಿಪಣಿಗಳಿರುವ ಅತ್ಯಾಧುನಿಕ ಶಸ್ತ್ರಾಗಾರ ಹೊಂದಿರುವ ಹಿಜ್ಬುಲ್ಲಾ ವನ್ನು ಅದರ ಮಿತ್ರ ಹಮಾಸ್ಗಿಂತ ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಹಿಜ್ಬುಲ್ಲಾ ತನ್ನ ಡ್ರೋನ್ಗಳ ಬಳಕೆಯನ್ನು ಹೆಚ್ಚಿಸಿದೆ.
ಇಸ್ರೇಲ್ ನ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ, ನೆತನ್ಯಾಹು ಅವರ ಭದ್ರತಾ ಕ್ಯಾಬಿನೆಟ್ ರವಿವಾರ ಬೆಳಿಗ್ಗೆ ಸಭೆ ಸೇರಲಿದೆ ಎಂದು ತಿಳಿದು ಬಂದಿದೆ.