ಗಾಝಾ ವಶಕ್ಕೆ ಪಣತೊಟ್ಟ ಇಸ್ರೇಲ್ ; 10,000ಕ್ಕೂ ಅಧಿಕ ಯೋಧರ ರವಾನೆ
Photo: PTI
ಟೆಲ್ ಅವೀವ್ : ಗಾಝಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಮತ್ತು ಹಮಾಸ್ ಮುಖಂಡರನ್ನು ನಾಶಗೊಳಿಸಲು 10,000ಕ್ಕೂ ಅಧಿಕ ಯೋಧರನ್ನು ರವಾನಿಸುವ ಯೋಜನೆ ರೂಪಿಸಿದೆ ಎಂದು ಇಸ್ರೇಲ್ ಸೇನಾಧಿಕಾರಿಗಳನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಇಸ್ರೇಲಿ ಅಧಿಕಾರಿಗಳ ಪ್ರಕಾರ, ಯೋಧರು ಶಂಕಿತರ ಮೇಲೆ ಗುಂಡು ಹಾರಿಸಲು ಸುಲಭವಾಗುವಂತೆ ಇಸ್ರೇಲ್ ಭದ್ರತಾ ಪಡೆಯ ನಿಯಮವನ್ನು ಸಡಿಲಿಸಲಾಗಿದೆ. ಈ ವಿಶೇಷ ತುಕಡಿಗೆ ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ನನ್ನು ಹತ್ಯೆಗೈಯುವ ಕಾರ್ಯವನ್ನು ನಿರ್ದಿಷ್ಟವಾಗಿ ವಹಿಸಿಕೊಡಲಾಗಿದೆ. `ಆ ವ್ಯಕ್ತಿ ನಮ್ಮ ಗುರಿಯಾಗಿದ್ದಾನೆ. ಆತ ನಡೆದಾಡುವ ಮೃತ ವ್ಯಕ್ತಿಯಾಗಿದ್ದು ಆತನ ಬಳಿಗೆ ನಾವು ಹೋಗುತ್ತೇವೆ' ಎಂದು ಇಸ್ರೇಲ್ ಪಡೆಯ ವಕ್ತಾರ ಲೆ| ಕ| ರಿಚರ್ಡ್ ಹೆಚಿಟ್ ಹೇಳಿದ್ದಾರೆ.
ಇದು ಗಾಝಾದ ಜನತೆಯ ಜತೆಗಿನ ಯುದ್ಧವಲ್ಲ. ನಮ್ಮ ಜನತೆಗೆ ಸಂಬಂಧಿಸಿದ ಜವಾಬ್ದಾರಿ ನಮಗಿದೆ ಮತ್ತು ಇಂತಹ ವಿಷಯ ಮತ್ತೆ ಮರುಕಳಿಸದಂತೆ ಖಾತರಿ ಪಡಿಸಬೇಕಿದೆ. ಆದ್ದರಿಂದಲೇ ಗಾಝಾದಿಂದ ಹಮಾಸ್ ಅನ್ನು ನಿವಾರಿಸುವ ಕಾರ್ಯದಲ್ಲಿ ಇಸ್ರೇಲ್ ಪಡೆ ತೊಡಗಿದೆ' ಎಂದವರು ಟ್ವೀಟ್ ಮಾಡಿದ್ದಾರೆ.
ಗಾಝಾದ ಉತ್ತರದಲ್ಲಿ ಹಮಾಸ್ ಅನ್ನು ಕೇಂದ್ರೀಕರಿಸಿ ನಡೆಯುವ ಕಾರ್ಯಾಚರಣೆಯಲ್ಲಿ ನಾಗರಿಕರ ಸಾವು-ನೋವನ್ನು ನಿವಾರಿಸುವುದು ಸ್ಥಳೀಯರ ಸ್ಥಳಾಂತರದ ಉದ್ದೇಶವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು:
► ಇಸ್ರೇಲ್ ನೀಡಿರುವ ಸ್ಥಳಾಂತರದ ಆದೇಶವು ಉತ್ತರ ಗಾಝಾದಲ್ಲಿನ ಆಸ್ಪತ್ರೆಯಲ್ಲಿರುವ ನವಜಾತ ಶಿಶುಗಳು, ಐಸಿಯುನಲ್ಲಿರುವ ರೋಗಿಗಳು ಸೇರಿದಂತೆ 2000ಕ್ಕೂ ಅಧಿಕ ರೋಗಿಗಳಿಗೆ ಮರಣದಂಡನೆಗೆ ಸಮವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
► ಉತ್ತರ ಇಸ್ರೇಲ್ ನ ಗಡಿಭಾಗದಲ್ಲಿ ಹಿಜ್ಬುಲ್ಲಾ ಜತೆ ಯುದ್ಧ ನಡೆಸಲು ತನಗೆ ಆಸಕ್ತಿಯಿಲ್ಲ. ಹಿಜ್ಬುಲ್ಲಾ ಗುಂಪು ನಮ್ಮನ್ನು ಕೆಣಕದಿದ್ದರೆ ಅವರ ವಿರುದ್ಧ ನಾವು ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್ ನ ರಕ್ಷಣಾ ಸಚಿವರು ಹೇಳಿದ್ದಾರೆ.
► ಹಮಾಸ್ ನ ಕೃತ್ಯಗಳಿಂದಾಗಿ ಗಾಝಾ ಪಟ್ಟಿಯಲ್ಲಿ ಅಮಾಯಕ ಫೆಲೆಸ್ತೀನೀಯರು ಅನವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದಾರೆ.
► ಒಂದು ವೇಳೆ ಇಸ್ರೇಲ್ ಗಾಝಾವನ್ನು ಆಕ್ರಮಿಸಿದರೆ ಪರಿಸ್ಥಿತಿ ಕೈಮೀರಿ ಹೋಗದು ಎಂದು ಯಾರೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ.
► ನಾಗರಿಕರು ಸುರಕ್ಷಿತವಾಗಿ ಗಾಝಾದಿಂದ ಹೊರತೆರಲು ಕಾರಿಡಾರ್ ತೆರೆಯಲಾಗಿದ್ದರೂ ಯುದ್ಧಗ್ರಸ್ಥ ಗಾಝಾ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿರುವ ಫೆಲೆಸ್ತೀನೀಯರನ್ನು ಹಮಾಸ್ ತಡೆಯುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.
► ಗಾಝಾದ ಮೇಲೆ ನೆಲದ ಮೇಲಿನ ಆಕ್ರಮಣಕ್ಕೆ ಇಸ್ರೇಲ್ ಸೇನೆ ಸಿದ್ಧತೆ ನಡೆಸುತ್ತಿರುವಂತೆಯೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದಾರೆ.