ಗಾಝಾಕ್ಕೆ ನೆರವು ವಿತರಣೆ ತಡೆಯುತ್ತಿರುವ ಇಸ್ರೇಲ್ ನಿಂದ ಐಸಿಜೆ ಆದೇಶದ ಉಲ್ಲಂಘನೆ: `ಹ್ಯೂಮನ್ ರೈಟ್ಸ್ ವಾಚ್' ಆರೋಪ
Photo: PTI
ಗಾಝಾ: ಗಾಝಾ ಪಟ್ಟಿಯಲ್ಲಿರುವ ಹತಾಶ ಜನರಿಗಾಗಿ ಒದಗಿಸುತ್ತಿರುವ ಅಂತರಾಷ್ಟ್ರೀಯ ನೆರವಿನ ವಿತರಣೆಯನ್ನು ತಡೆಯವ ಮೂಲಕ ಇಸ್ರೇಲ್ ವಿಶ್ವಸಂಸ್ಥೆಯ ಉನ್ನತ ನ್ಯಾಯಸಂಸ್ಥೆ ಅಂತರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಆದೇಶವನ್ನು ಉಲ್ಲಂಘಿಸಿದೆ ಎಂದು ನ್ಯೂಯಾರ್ಕ್ ಮೂಲದ `ಹ್ಯೂಮನ್ ರೈಟ್ಸ್ ವಾಚ್' ಆರೋಪಿಸಿದೆ.
ಹಮಾಸ್ ವಿರುದ್ಧ ಗಾಝಾದಲ್ಲಿ ನಡೆಸುತ್ತಿರುವ ಯುದ್ಧದ ಸಂದರ್ಭ ಮಾನವೀಯ ನೆರವಿನ ವಿತರಣೆಗೆ ಅಡ್ಡಿಪಡಿಸದಂತೆ ಐಸಿಜೆ ಇಸ್ರೇಲ್ಗೆ ಸೂಚಿಸಿತ್ತು. ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಮಂಡಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಐಸಿಜೆ `ಫೆಲೆಸ್ತೀನ್ ಪ್ರದೇಶದಲ್ಲಿ ಸಾವು, ವಿನಾಶ ಮತ್ತು ಉದ್ದೇಶಪೂರ್ವಕ ಹತ್ಯೆಯನ್ನು ತಡೆಯಲು ಎಲ್ಲಾ ಕ್ರಮ ಕೈಗೊಳ್ಳುವಂತೆ' ಇಸ್ರೇಲ್ಗೆ ಆದೇಶಿಸಿತ್ತು. ಜನವರಿ 26ರಂದು ಐಸಿಜೆ ನೀಡಿದ್ದ ತೀರ್ಪಿನಲ್ಲಿ ಆರು ತಾತ್ಕಾಲಿಕ ಕ್ರಮಗಳನ್ನು ಅನುಸರಿಸಲು ಇಸ್ರೇಲ್ಗೆ ಆದೇಶ ನೀಡಲಾಗಿತ್ತು. ಇದರಲ್ಲಿ `ಗಾಝಾಕ್ಕೆ ತುರ್ತಾಗಿ ಅಗತ್ಯವಿರುವ ಮೂಲಭೂತ ಸೇವೆಗಳು ಮತ್ತು ಮಾನವೀಯ ಸಹಾಯ ಒದಗಿಸುವುದನ್ನು ಸಕ್ರಿಯಗೊಳಿಸಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು' ಸೇರಿದೆ. ಈ ಕ್ರಮಗಳನ್ನು ಅನುಸರಿಸಲು ಏನು ಮಾಡಿದ್ದೇನೆ ಎಂಬ ಬಗ್ಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಇಸ್ರೇಲ್ಗೆ ಸೂಚಿಸಲಾಗಿತ್ತು. ಈ ವರದಿಯನ್ನು ಈಗಾಗಲೇ ಸೂಚಿಸಿರುವುದಾಗಿ ಇಸ್ರೇಲ್ನ ವಿದೇಶಾಂಗ ಇಲಾಖೆ ಹೇಳಿದೆ. ಜತೆಗೆ ರವಿವಾರ ನೆರವು ಹೊತ್ತ 245 ಟ್ರಕ್ಗಳು ಗಾಝಾವನ್ನು ಪ್ರವೇಶಿಸಿವೆ ಎಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ `ಹ್ಯೂಮನ್ ರೈಟ್ಸ್ ವಾಚ್' ವಿಶ್ವಸಂಸ್ಥೆಯ ಸೂಚನೆ ಪ್ರಕಾರ ದಿನಾ ಒದಗಿಸಬೇಕಿರುವ ನೆರವಿನ ಪ್ರಮಾಣಕ್ಕಿಂತ 30%ದಷ್ಟು ಕಡಿಮೆ ಪ್ರಮಾಣದ ನೆರವು ಒದಗಿಸಲಾಗುತ್ತಿದೆ. ಜನವರಿ 27ರಿಂದ ಫೆಬ್ರವರಿ 21ರ ನಡುವಿನ ಅವಧಿಯಲ್ಲಿ ಗಾಝಾ ಪ್ರವೇಶಿಸಿದ ಟ್ರಕ್ಗಳ ದೈನಂದಿನ ಸರಾಸರಿ 93ಕ್ಕೆ ಕುಸಿದಿದೆ. ಫೆಬ್ರವರಿ 9ರಿಂದ ಫೆಬ್ರವರಿ 21ರ ಅವಧಿಯಲ್ಲಿ ಸರಾಸರಿ 57 ಟ್ರಕ್ಗಳಷ್ಟು ನೆರವು ಪೂರೈಕೆಯಾಗಿದೆ. ಯುದ್ಧದಿಂದ ತೀವ್ರ ಜರ್ಝರಿತಗೊಂಡಿರುವ ಉತ್ತರ ಗಾಝಾಕ್ಕೆ ತೈಲ ಪೂರೈಕೆಗೆ ಇಸ್ರೇಲ್ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ ಮತ್ತು ಉತ್ತರಕ್ಕೆ ನೆರವು ಒದಗಿಸಲು ತಡೆಯೊಡ್ಡುತ್ತಿದೆ ಎಂದಿದೆ.
ಉತ್ತರ ಗಾಝಾಕ್ಕೆ ನೆರವು ಒದಗಿಸುವ ಉಪಕ್ರಮವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಳೆದ ವಾರ ವಿಶ್ವ ಆಹಾರ ಯೋಜನೆಯ ಅಧಿಕಾರಿಗಳು ಹೇಳಿದ್ದರು.
ಇಸ್ರೇಲಿ ಸರಕಾರವು ನ್ಯಾಯಾಲಯದ ತೀರ್ಪನ್ನು ನಿರ್ಲಕ್ಷಿಸಿದೆ ಮತ್ತು ತನ್ನ ದಬ್ಬಾಳಿಕೆಯನ್ನು ತೀವ್ರಗೊಳಿಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ನ ಇಸ್ರೇಲ್ ಮತ್ತು ಫೆಲೆಸ್ತೀನ್ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಐಸಿಜೆಯ ತೀರ್ಪು ಹೊರಬಿದ್ದಂದಿನಿಂದ ಉತ್ತರ ಗಾಝಾದ ಪ್ರದೇಶಗಳಿಗೆ ಕನಿಷ್ಟ ನೆರವು ತಲುಪಿದೆ ಎಂದು 70ಕ್ಕೂ ಅಧಿಕ ಮಾನವೀಯ ನೆರವು ಸಂಸ್ಥೆಗಳ ಒಕ್ಕೂಟ `ದಿ ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಏಜೆನ್ಸೀಸ್' ಹೇಳಿದೆ.