ರಫಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ : ವರದಿ
ರಫಾ: ದಕ್ಷಿಣ ಗಾಝಾದ ರಫಾ ನಗರದಿಂದ ತೆರವುಗೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಿದ ಕೆಲವೇ ಗಂಟೆಗಳ ಬಳಿಕ ಇಸ್ರೇಲ್ ಮಿಲಿಟರಿ ರಫಾದ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಸ್ಥಳೀಯರನ್ನು ಉಲ್ಲೇಖಿಸಿ ಅಲ್-ಅಕ್ಸಾ ಟಿವಿ ವರದಿ ಮಾಡಿದೆ.
ದಾಳಿಯಲ್ಲಿ ಸಾವು-ನೋವಿನ ಬಗ್ಗೆ ಮಾಹಿತಿಯಿಲ್ಲ ಎಂದು ವರದಿ ಹೇಳಿದೆ.
ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಇಸ್ರೇಲ್ ಸೇನೆ ನೀಡಿರುವ ಆದೇಶವು ಅಪಾಯಕಾರಿ ಪ್ರಚೋದನೆಯಾಗಿದ್ದು ತೀವ್ರ ಪರಿಣಾಮಕ್ಕೆ ಕಾರಣವಾಗಲಿದೆ. ಅಮೆರಿಕ ಆಡಳಿತ ಹಾಗೂ ಆಕ್ರಮಣಕಾರರು ಈ ಭಯೋತ್ಪಾದನೆಯ ಹೊಣೆಯನ್ನು ವಹಿಸಬೇಕಿದೆ ಎಂದು ಹಮಾಸ್‍ನ ಹಿರಿಯ ಮುಖಂಡ ಸಮಿ ಅಬು ಝುಹ್ರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ರಫಾದಲ್ಲಿ ಯಾವುದೇ ಕಾರ್ಯಾಚರಣೆಯನ್ನು `ಪಿಕ್ನಿಕ್' ಎಂದು ಇಸ್ರೇಲ್ ಪಡೆ ಭಾವಿಸುವುದು ಬೇಡ. ರಫಾದಲ್ಲಿ ಫೆಲಸ್ತೀನೀಯರನ್ನು ರಕ್ಷಿಸಲು ತಾನು ಸಂಪೂರ್ಣ ಸನ್ನದ್ಧಗೊಂಡಿದ್ದೇನೆ ಎಂದು ಹಮಾಸ್ ಹೇಳಿದೆ. ಸುಮಾರು 2.3 ದಶಲಕ್ಷ ಫೆಲಸ್ತೀನೀಯರು ನೆಲೆಸಿರುವ ಗಾಝಾದಲ್ಲಿ ನೆಲೆಸಿರುವ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ರಫಾ ಕಾರ್ಯಾಚರಣೆಯಿಂದ ಮತ್ತಷ್ಟು ಹದಗೆಡಲಿದೆ ಮಾನವೀಯ ನೆರವು ಒದಗಿಸುವ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.