ದಕ್ಷಿಣ ಗಾಝಾ ಪಟ್ಟಿ ಪ್ರವೇಶಿಸಿದ ಇಸ್ರೇಲ್ ಪಡೆ ; `ಜಸ್ಟಿಸ್ ಪ್ಯಾಲೇಸ್' ನೆಲಸಮ
Photo- PTI
ಗಾಝಾ: ಇಸ್ರೇಲ್ನ ಟ್ಯಾಂಕ್ಗಳು ಸೋಮವಾರ ಖಾನ್ಯೂನಿಸ್ ನಗರದ ಬಳಿಯಿಂದ ದಕ್ಷಿಣ ಗಾಝಾ ಪಟ್ಟಿಯನ್ನು ಪ್ರವೇಶಿಸಿದ್ದು ಈ ಪ್ರದೇಶದಲ್ಲಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ನೆಲದ ಮೇಲಿನ ಆಕ್ರಮಣವನ್ನು ಶೀಘ್ರ ಆರಂಭಿಸುವ ನಿರೀಕ್ಷೆಯಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಗಾಝಾ ನಗರದಲ್ಲಿ `ಜಸ್ಟಿಸ್ ಪ್ಯಾಲೇಸ್' ಎಂದು ಕರೆಯಲಾಗುವ ಕಚೇರಿಯನ್ನು ನೆಲಸಮಗೊಳಿಸಲಾಗಿದೆ. ಶಸ್ತ್ರಸಜ್ಜಿತ ಸಿಬಂದಿ ವಾಹಕಗಳನ್ನು ಹಾಗೂ ಬುಲ್ಡೋಜರ್ಗಳನ್ನೂ ತರಲಾಗಿದೆ ಎಂದು ಐಡಿಎಫ್ ಘೋಷಿಸಿದೆ. ಗಾಝಾ ನಗರದ ಮಧ್ಯಭಾಗದಲ್ಲಿರುವ ಜಸ್ಟಿಸ್ ಪ್ಯಾಲೇಸ್ ಹಮಾಸ್ನ ಪ್ರಧಾನ ನ್ಯಾಯಾಲಯವಾಗಿದೆ. ಗಾಝಾ ಪಟ್ಟಿಯ ಸಲಾಹ್ ಅಲದೀನ್ ರಸ್ತೆಯನ್ನು ಐಡಿಎಫ್ ಎರಡೂ ಕಡೆಯಿಂದ ಬ್ಲಾಕ್ ಮಾಡಿದ್ದು ಕೇಂದ್ರ ಗಾಝಾದ ದೆಯರ್ ಅಲ್ಬಲಾಹ್ ಮತ್ತು ಖಾನ್ ಯೂನಿಸ್ ಪ್ರದೇಶದ ನಡುವಿನ ಸಂಪರ್ಕ ಕಡಿತಗೊಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಮಧ್ಯೆ, ತಾನು ಯಾವುದೇ ವ್ಯಕ್ತಿಯನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸಲು ಇಚ್ಛಿಸಿಲ್ಲ. ಯುದ್ಧಕ್ಷೇತ್ರವನ್ನು ತೊರೆಯುವಂತೆ ನಾಗರಿಕರಿಗೆ ಮನವಿ ಮಾಡಿದ್ದೇವೆ. ಗಾಝಾ ಪಟ್ಟಿಯೊಳಗೆ ಸುರಕ್ಷಿತ ಮಾನವೀಯ ವಲಯವನ್ನು ವ್ಯವಸ್ಥೆ ಮಾಡಲಿದ್ದೇವೆ' ಎಂದು ಇಸ್ರೇಲ್ ಸೇನೆಯ ವಕ್ತಾರ ಜೊನಾಥನ್ ಕಾನ್ರಿಕಸ್ ಹೇಳಿದ್ದಾರೆ.