ಗಾಝಾದಲ್ಲಿ ಇಸ್ರೇಲ್ ಪದಾತಿ ದಳದ ಕಾರ್ಯಾಚರಣೆ ; ಟ್ಯಾಂಕ್ ಮೂಲಕ ದಾಳಿ
Photo: PTI
ಟೆಲ್ಅವೀವ್: ಬುಧವಾರ ತಡರಾತ್ರಿ ತನ್ನ ಪದಾತಿ ದಳವು ಟ್ಯಾಂಕ್ಗಳ ನೆರವಿನಿಂದ ಉತ್ತರ ಗಾಝಾಕ್ಕೆ ನುಗ್ಗಿ ಉದ್ದೇಶಿತ ಗುರಿಯ ಮೇಲೆ ದಾಳಿ ನಡೆಸಿ ವಾಪಸಾಗಿದ್ದು, ಇದು ಮುಂದಿನ ಹಂತದ ಹೋರಾಟಕ್ಕೆ ಸಿದ್ಧತೆಯಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಗುರುವಾರ ಹೇಳಿದೆ.
ಹಮಾಸ್ ಆಡಳಿತದ ಪ್ರದೇಶದಲ್ಲಿ ಮುಂದಿನ ಹಂತದಲ್ಲಿ ನಡೆಯುವ ಸಂಘಟಿತ ನೆಲದ ಮೇಲಿನ ಆಕ್ರಮಣಕ್ಕೆ ಪೂರ್ವಸಿದ್ಧತೆಯಾಗಿ ನಡೆದ ಕಾರ್ಯಾಚರಣೆಯಲ್ಲಿ ಶತ್ರುಗಳ ವಿವಿಧ ನೆಲೆಗಳು, ಟ್ಯಾಂಕ್ ನಿರೋಧಕ ಕ್ಷಿಪಣಿ ಉಡಾವಣಾ ವ್ಯವಸ್ಥೆ, ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಇಸ್ರೇಲ್ ಪಡೆ ಗಾಝಾದಲ್ಲಿ ಟ್ಯಾಂಕ್ಗಳ ಮೂಲಕ ದಾಳಿ ನಡೆಸಿದೆ.
ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
► ಉತ್ತರದ ಗಡಿಭಾಗದಲ್ಲಿ ಹಿಜ್ಬುಲ್ಲಾ ಪಡೆಯ ಜತೆ ಇಸ್ರೇಲ್ ಪಡೆ ಗುಂಡಿನ ಚಕಮಕಿ ನಡೆಸಿದೆ. ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಹಮಾಸ್ನ ರಾಜಕೀಯ ಬ್ಯೂರೊದ ಉಪಮುಖ್ಯಸ್ಥರ ಭೇಟಿ.
► ಇಸ್ರೇಲ್-ಹಮಾಸ್ ಸಂಘರ್ಷವು ಮಧ್ಯಪ್ರಾಚ್ಯವನ್ನು ಮೀರಿ ಹರಡಬಹುದು - ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ.
► ಈಗ ನಡೆಯುತ್ತಿರುವ ಸಂಘರ್ಷ ಯುದ್ಧವಲ್ಲ, ನರಮೇಧವಾಗಿದೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಷಿಯೊ ಲುಲಾ ಡ'ಸಿಲ್ವಾ ಹೇಳಿದ್ದಾರೆ.
► ಗಾಝಾಕ್ಕೆ ಇಸ್ರೇಲ್ ನಡೆಸಲು ಉದ್ದೇಶಿಸಿರುವ ಬೃಹತ್ ನೆಲದ ಮೇಲಿನ ಆಕ್ರಮಣ ಒಂದು ಪ್ರಮಾದವಾಗಲಿದೆ ಮತ್ತು ನಾಗರಿಕರಿಗೆ ಅಪಾರ ಹಾನಿ ಉಂಟುಮಾಡಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಗುರುವಾರ ಎಚ್ಚರಿಸಿದ್ದಾರೆ.
► ಗಾಝಾದಲ್ಲಿನ ಇಂಡೊನೇಶ್ಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವೈದ್ಯರ ಕುಟುಂಬ ಗುರುವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದೆ ಎಂದು ಸರಕಾರೇತರ ಸಂಸ್ಥೆ ವರದಿ ಮಾಡಿದೆ.
► ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ದೈನಂದಿನ ಅಪರಾಧಗಳ ಬಗ್ಗೆ ಅಂತರಾಷ್ಟ್ರೀಯ ಸಮುದಾಯದ ಮೌನ ನಾಚಿಕೆಗೇಡು ಎಂದು ಅರಬ್ ಸಂಸತ್ನ ಸ್ಪೀಕರ್ ಅಡೆಲ್ ಅಬ್ದುಲ್ರಹ್ಮಾನ್ ಅಲ್-ಅಸೌಮಿ ಟೀಕಿಸಿದ್ದಾರೆ.