ದಕ್ಷಿಣ ಗಾಝಾದಲ್ಲಿ ಯುದ್ಧತಂತ್ರದ ವಿರಾಮ : ಇಸ್ರೇಲ್ ಘೋಷಣೆ
►ನೆರವು ವಿತರಣೆಗೆ ಪೂರಕ ಕ್ರಮದ ವಾಗ್ದಾನ ►ಇಸ್ರೇಲ್ ಕ್ರಮಕ್ಕೆ ವಿಶ್ವಸಂಸ್ಥೆ ಸ್ವಾಗತ

ಸಾಂದರ್ಭಿಕ ಚಿತ್ರ PC : NDTV
ಜೆರುಸಲೇಮ್: ಮುತ್ತಿಗೆಗೆ ಒಳಗಾದ ಫೆಲೆಸ್ತೀನ್ ಪ್ರದೇಶದಲ್ಲಿ ಭೀಕರ ಕ್ಷಾಮದ ಎಚ್ಚರಿಕೆಯ ನಂತರ, ದಕ್ಷಿಣ ಗಾಝಾ ಮಾರ್ಗವಾಗಿ ದೈನಂದಿನ ನೆರವು ವಿತರಣೆಗೆ ಅನುಕೂಲ ಮಾಡಿಕೊಡಲು ಈ ಪ್ರದೇಶದಲ್ಲಿ ಯುದ್ಧಕ್ಕೆ ವಿರಾಮ ನೀಡುವುದಾಗಿ ಇಸ್ರೇಲ್ ಮಿಲಿಟರಿ ರವಿವಾರ ಹೇಳಿದೆ.
ಶನಿವಾರ ರಫಾದಲ್ಲಿ ನಡೆದ ಸ್ಫೋಟದಲ್ಲಿ ಇಸ್ರೇಲ್ನ 8 ಯೋಧರು ಮೃತಪಟ್ಟಿದ್ದರೆ, ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಸ್ರೇಲ್ನ ಮೂವರು ಯೋಧರು ಹತರಾಗಿದ್ದರು. ಇದರ ಬೆನ್ನಲ್ಲೇ ರಫಾ ಪ್ರದೇಶದಲ್ಲಿ `ಸ್ಥಳೀಯ ಮಿಲಿಟರಿ ಚಟುವಟಿಕೆಗಳಿಗೆ ಯುದ್ಧತಂತ್ರದ ವಿರಾಮ'ದ ಘೋಷಣೆ ಹೊರಬಿದ್ದಿದೆ.
ಮೇ ತಿಂಗಳ ಆರಂಭದಲ್ಲಿ ಗಾಝಾ ಪಟ್ಟಿಗೆ ಇಸ್ರೇಲ್ ಸೇನೆ ಮುತ್ತಿಗೆ ಹಾಕಿದಂದಿನಿಂದ ಮತ್ತು ಈಜಿಪ್ಟ್ ನ ಗಡಿಗೆ ಹೊಂದಿಕೊಂಡಿರುವ ರಫಾ ಗಡಿದಾಟನ್ನು ಮುಚ್ಚಿದ ಬಳಿಕ ಈ ಪ್ರದೇಶದಲ್ಲಿ ಆಹಾರ ಮತ್ತಿತರ ದೈನಂದಿನ ಅಗತ್ಯವಸ್ತುಗಳ ತೀವ್ರ ಕೊರತೆಯಾಗಿದ್ದು ಕ್ಷಾಮದ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳು ಹಾಗೂ ನೆರವು ವಿತರಣೆ ಸಂಸ್ಥೆಗಳು ಪದೇಪದೇ ಎಚ್ಚರಿಕೆ ನೀಡಿವೆ.
`ಕೆರೆಮ್ ಶಲೋಮ್ ಗಡಿದಾಟಿನಿಂದ ಸಲಾಹ್-ಅಲ್ದಿನ್ ರಸ್ತೆಯವರೆಗೆ ಹಾಗೂ ಅಲ್ಲಿಂದ ಉತ್ತರದ ಪ್ರದೇಶದಲ್ಲಿ ಪ್ರತೀ ದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ(ಸ್ಥಳೀಯ ಕಾಲಮಾನ) ಮಾನವೀಯ ಉದ್ದೇಶದಿಂದ ಮಿಲಿಟರಿ ಚಟುವಟಿಕೆಗೆ ಯುದ್ಧತಂತ್ರದ ವಿರಾಮ ಘೋಷಿಸಲಾಗಿದೆ. ಮುಂದಿನ ಸೂಚನೆಯವರೆಗೆ ಇದು ಜಾರಿಯಲ್ಲಿರುತ್ತದೆ' ಎಂದು ಇಸ್ರೇಲ್ ಮಿಲಿಟರಿಯ ಹೇಳಿಕೆ ತಿಳಿಸಿದೆ. ಜತೆಗೆ ಬಿಡುಗಡೆಗೊಳಿಸಿರುವ ನಕ್ಷೆಯಲ್ಲಿ `ಮಾನವೀಯ ಉಪಕ್ರಮದ' ವ್ಯಾಪ್ತಿಯನ್ನು ಕೆರೆಮ್ ಶಲೋಮ್ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ರಫಾದ ಯುರೋಪಿಯನ್ ಆಸ್ಪತ್ರೆಯವರೆಗೆ ಎಂದು ಗುರುತಿಸಲಾಗಿದೆ.
ಆದರೆ ದಕ್ಷಿಣ ಗಾಝಾ ಪಟ್ಟಿಯಲ್ಲಿ ಯಾವುದೇ ಯುದ್ಧದ ನಿಲುಗಡೆಯಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದ್ದರೂ ಗಾಝಾದಲ್ಲಿ ರವಿವಾರ ಬೆಳಿಗ್ಗೆ ವೈಮಾನಿಕ ದಾಳಿ, ಫಿರಂಗಿ ದಾಳಿ ಅಥವಾ ಹೋರಾಟದ ಬಗ್ಗೆ ಮಾಹಿತಿಯಿಲ್ಲ ಎಂದು ಎಎಫ್ಪಿ ವರದಿ ಮಾಡಿದೆ. ವಿಶ್ವಸಂಸ್ಥೆ ಹಾಗೂ ಇತರ ಸಂಘಟನೆಗಳೊಂದಿಗಿನ ಮಾತುಕತೆಯ ಬಳಿಕ, ಗಾಝಾ ಪಟ್ಟಿ ಪ್ರವೇಶಿಸುವ ಮಾನವೀಯ ನೆರವಿನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿರುವ ಈ ಕ್ರಮ ಈಗಾಗಲೇ ಜಾರಿಗೊಂಡಿದೆ ಎಂದು ಇಸ್ರೇಲ್ ಹೇಳಿದೆ.
►ಹಮಾಸ್ ಪ್ರತಿಕ್ರಿಯೆ
ಯುದ್ದತಂತ್ರದ ಯುದ್ಧವಿರಾಮ ಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಮಾಸ್ನ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ `ಯಾವುದೇ ಯುದ್ಧವಿರಾಮ ಪ್ರಸ್ತಾವನೆಯು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸ್ತಾವಿಸಿರುವ ಯೋಜನೆಯಲ್ಲಿ ಮುಂದಿಟ್ಟಿರುವ ತತ್ವಗಳನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ' ಎಂದಿದ್ದಾರೆ.
ಗಾಝಾ ಪಟ್ಟಿಯಿಂದ ಸೇನೆ ಹಿಂತೆಗೆತ, ನಾಶಗೊಂಡಿರುವುದರ ಮರು ನಿರ್ಮಾಣ, ಒತ್ತೆಯಾಳು- ಕೈದಿಗಳ ವಿನಿಮಯ ಒಪ್ಪಂದವನ್ನು ಒಳಗೊಂಡ ಸಮಗ್ರ ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಮತ್ತು ಫೆಲೆಸ್ತೀನ್ ಗುಂಪು ಸಿದ್ಧವಾಗಿದೆ ಎಂದವರು ಹೇಳಿದ್ದಾರೆ.
ಇಸ್ರೇಲ್ ಕ್ರಮಕ್ಕೆ ವಿಶ್ವಸಂಸ್ಥೆ ಸ್ವಾಗತ | ಇನ್ನಷ್ಟು ಸಶಕ್ತ ಕ್ರಮಗಳಿಗೆ ಆಗ್ರಹ
ದೈನಂದಿನ ನೆರವು ಪೂರೈಸಲು ದಕ್ಷಿಣ ಗಾಝಾದಲ್ಲಿ ಹಗಲು ಯುದ್ಧವಿರಾಮ ಘೋಷಿಸಿದ ಇಸ್ರೇಲ್ ಕ್ರಮವನ್ನು ವಿಶ್ವಸಂಸ್ಥೆ ರವಿವಾರ ಸ್ವಾಗತಿಸಿದ್ದು ಮಾನವೀಯ ನೆರವು ಪೂರೈಕೆಗೆ ಅಡೆತಡೆಯನ್ನು ನಿವಾರಿಸಲು ಸಶಕ್ತ ಕ್ರಮಕ್ಕೆ ಆಗ್ರಹಿಸಿದೆ.
`ಈ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಹೆಚ್ಚಿನ ನೆರವು ಒದಗಿಸಲು ಇನ್ನಷ್ಟು ಕ್ರಮಗಳ ಅಗತ್ಯವಿದೆ. ಗಾಝಾದಲ್ಲಿ ಮಾನವೀಯ ನೆರವು ಒದಗಿಸಲು ಇರುವ ಅಡ್ಡಿಯನ್ನು ನಿವಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಇದು ಇಸ್ರೇಲ್ಗೆ ಪ್ರೇರಣೆಯಾಗುವ ವಿಶ್ವಾಸವಿದೆ' ಎಂದು ವಿಶ್ವಸಂಸ್ಥೆಯ ನೆರವು ಏಜೆನ್ಸಿ ಒಸಿಎಚ್ಎ(ಮಾನವೀಯ ವ್ಯವಹಾರಗಳ ಸಮನ್ವಯ ಏಜೆನ್ಸಿ) ವಕ್ತಾರ ಜೆನ್ಸ್ ಲೆಯರ್ಕ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಆಹಾರದ ಕೊರತೆಯ ಮಹಾದುರಂತಕ್ಕೆ ಸಾಕ್ಷಿಯಾಗಿರುವ ಗಾಝಾದಾದ್ಯಂತ ಅಗತ್ಯವಿರುವವರಿಗೆ ಜೀವನಾಧಾರ ನೆರವು ಒದಗಿಸಲು ಎಲ್ಲಾ ಪಕ್ಷಗಳೊಂದಿಗೆ ಕಾರ್ಯನಿರ್ವಹಿಸಲು ವಿಶ್ವಸಂಸ್ಥೆ ಮತ್ತು ಮಾನವೀಯ ನೆರವಿನ ಪಾಲುದಾರರು ಸಿದ್ಧವಿದ್ದಾರೆ. ಗಾಝಾದಲ್ಲಿ ಪೀಡಿತ ಮತ್ತು ಸ್ಥಳಾಂತರಗೊಂಡ ಕುಟುಂಬದ ಜೀವನ ಪರಿಸ್ಥಿತಿಗಳು ಭೀಕರವಾಗಿವೆ. ಅವರಿಗೆ ಆಹಾರ, ನೀರು, ನೈರ್ಮಲ್ಯ ವ್ಯವಸ್ಥೆ, ಆಶ್ರಯ, ಆರೋಗ್ಯಸೇವೆಯ ತುರ್ತು ಅಗತ್ಯವಿದೆ. ಇವರಲ್ಲಿ ಹಲವರು ತ್ಯಾಜ್ಯದ ರಾಶಿಯ ಬಳಿಯ ಟೆಂಟ್ನಲ್ಲಿ ನೆಲೆಸಿದ್ದು ಅನಾರೋಗ್ಯದ ಅಪಾಯ ಹೆಚ್ಚಿದೆ ಎಂದವರು ಹೇಳಿದ್ದು, ಗಾಝಾದಲ್ಲಿ ಮಾನವೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸುಗಮಗೊಳಿಸಬೇಕು ಮತ್ತು ಎಲ್ಲಾ ತಡೆಗಳನ್ನು ತೆರವುಗೊಳಿಸಬೇಕು . ಗಾಝಾದಾದ್ಯಂತ ನೆರವನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ತಲುಪಿಸಲು ನಮಗೆ ಸಾಧ್ಯವಾಗಬೇಕು. ಎಲ್ಲಾ ರಸ್ತೆಗಳು, ಗಡಿದಾಟುಗಳೂ ಕಾರ್ಯ ನಿರ್ವಹಿಸುವಂತಾಗಬೇಕು. ಗಾಝಾದಲ್ಲಿ ಇಂಧನದ ತೀವ್ರ ಕೊರತೆಯಿದೆ. ಇಸ್ರೇಲ್ ಅಧಿಕಾರಿಗಳು ದೀರ್ಘಕಾಲದಿಂದ ನಿರಾಕರಿಸಿರುವ ಅಗತ್ಯ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ ಎಂದಿದ್ದಾರೆ.
ಹತಾಶೆ ಮತ್ತು ನೆರವಿನ ಕೊರತೆಯಿಂದ ಗಾಝಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ಅಂಚಿಗೆ ತಲುಪಿದೆ ಎಂದು ಜೆನ್ಸ್ ಲೆಯರ್ಕ್ ಎಚ್ಚರಿಕೆ ನೀಡಿದ್ದಾರೆ.