ವಾಯುರಕ್ಷಣೆ ಬಿಗಿಗೊಳಿಸಿದ ಇಸ್ರೇಲ್ | ಮೀಸಲು ಯೋಧರಿಗೆ ಕರೆ

ಸಾಂದರ್ಭಿಕ ಚಿತ್ರ | Photo : NDTV
ಟೆಲ್ಅವೀವ್: ಈ ವಾರದ ಆರಂಭದಲ್ಲಿ ಸಿರಿಯಾದಲ್ಲಿ ನಡೆದ ದಾಳಿಗೆ ಇರಾನ್ನ ಪ್ರತೀಕಾರ ಕ್ರಮದ ಸಾಧ್ಯತೆಯ ಹಿನ್ನೆಲೆಯಲ್ಲಿ ತನ್ನ ವಾಯುರಕ್ಷಣೆ ವ್ಯವಸ್ಥೆಯನ್ನು ಇಸ್ರೇಲ್ ಬಿಗಿಗೊಳಿಸಿದ್ದು ಮೀಸಲು ಯೋಧರನ್ನು ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಬಳಿಯ ಕಾನ್ಸುಲರ್ ಕಟ್ಟಡದ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಪ್ರತಿಜ್ಞೆ ಮಾಡಿದೆ. ಇರಾನ್ ತಾನು ಬೆಂಬಲಿಸುತ್ತಿರುವ ಗುಂಪುಗಳ ಮೂಲಕ ಲೆಬನಾನ್, ಇರಾಕ್ ಅಥವಾ ಯೆಮೆನ್ನಿಂದ ದಾಳಿ ನಡೆಸುವ ಬದಲು ತನ್ನ ಪ್ರದೇಶದಿಂದ ನೇರವಾಗಿ ಕ್ಷಿಪಣಿ ದಾಳಿ ನಡೆಸಬಹುದು ಎಂದು ಇಸ್ರೇಲ್ ಲೆಕ್ಕಾಚಾರ ಹಾಕಿಕೊಂಡಿದೆ. ಇರಾನ್ನಿಂದ ನೇರ ದಾಳಿ ನಡೆದರೆ ಇದಕ್ಕೆ ಇಸ್ರೇಲ್ ರಕ್ಷಣಾ ಪಡೆಯಿಂದ ಗಮನಾರ್ಹ ಪ್ರತಿದಾಳಿ ನಡೆದು ಉದ್ವಿಗ್ನತೆ ಮತ್ತಷ್ಟು ಹೆಚ್ಚಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಮಧ್ಯಪ್ರಾಚ್ಯದಿಂದ ಹೊರಹೊಮ್ಮುವ ಬೆದರಿಕೆಯನ್ನು ಎದುರಿಸಲು ಇಸ್ರೇಲ್ ಸನ್ನದ್ಧತೆಯನ್ನು ಹೆಚ್ಚಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ. ಹಿಜ್ಬುಲ್ಲಾ ಹಾಗೂ ಇತರ ಪ್ರತಿಕೂಲ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯನ್ನು ವಿಸ್ತರಿಸುವ ಅಗತ್ಯವಿದ್ದು ಇದಕ್ಕಾಗಿ ಮೀಸಲು ಯೋಧರನ್ನು ಸಂಘಟಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.