ಗಾಝಾ ಯುದ್ಧವಿರಾಮಕ್ಕೆ ಅತೃಪ್ತಿ: ಇಸ್ರೇಲ್ ಸಚಿವ ಬೆನ್ಗ್ವಿರ್ ರಾಜೀನಾಮೆ

ಇಟಾಮರ್ ಬೆನ್ಗ್ವಿರ್ | PC : NDTV
ಜೆರುಸಲೇಂ: ಗಾಝಾದಲ್ಲಿ ಹಮಾಸ್ ಜತೆಗಿನ ಯುದ್ಧವಿರಾಮದ ಬಗ್ಗೆ ಅಸಮಾಧಾನಗೊಂಡಿರುವ ಇಸ್ರೇಲ್ ಸಚಿವ ಇಟಾಮರ್ ಬೆನ್ಗ್ವಿರ್ ರವಿವಾರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಾಷ್ಟ್ರೀಯ ಭದ್ರತಾ ಸಚಿವ ಬೆನ್ಗ್ವಿರ್ ಅವರ `ಜಿವಿಷ್ ಪವರ್ ಪಾರ್ಟಿ' ಗಾಝಾ ಕದನ ವಿರಾಮ ಒಪ್ಪಂದವನ್ನು ವಿರೋಧಿಸಿದ್ದು ಪಕ್ಷದ ಸಚಿವರು ಸರಕಾರದಿಂದ ಹೊರಬರಲಿದ್ದಾರೆ ಎಂದು ಘೋಷಿಸಿದೆ. ಬೆನ್ಗ್ವಿರ್ ಅವರ ಪಕ್ಷ ಸರಕಾರದಿಂದ ಹೊರಬಂದರೂ ಸರಕಾರ ಪತನಗೊಳ್ಳುವ ಸಾಧ್ಯತೆಯಿಲ್ಲ. ಆದರೆ ಮೈತ್ರಿ ಸರಕಾರದ ಸ್ಥಿರತೆಗೆ ಧಕ್ಕೆಯಾಗಲಿದೆ.
ಕದನ ವಿರಾಮ ಒಪ್ಪಂದವು ಹಮಾಸ್ಗೆ ಶರಣಾಗತಿಯಾಗಿದೆ . ನೂರಾರು ಕೊಲೆಗಡುಕರ ಬಿಡುಗಡೆ ಮತ್ತು ಗಾಝಾ ಯುದ್ಧದಲ್ಲಿ ಇಸ್ರೇಲ್ನ ಸಾಧನೆಗಳನ್ನು ತ್ಯಜಿಸಿದಂತಾಗಿದೆ' ಎಂದು ಜಿವಿಷ್ ಪವರ್ ಪಾರ್ಟಿ ಟೀಕಿಸಿದೆ. ಆದರೆ ನೆತನ್ಯಾಹು ಸರಕಾರವನ್ನು ಉರುಳಿಸಲು ಪ್ರಯತ್ನಿಸುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಈ ಮಧ್ಯೆ, ಕದನ ವಿರಾಮ ಒಪ್ಪಂದದಡಿ ತಾನು ಬಿಡುಗಡೆಗೊಳಿಸುವ ಮೂವರು ಒತ್ತೆಯಾಳುಗಳ ಹೆಸರನ್ನು ರವಿವಾರ ಹಮಾಸ್ ಬಿಡುಗಡೆಗೊಳಿಸುವ ಮೂಲಕ ಕದನ ವಿರಾಮ ಜಾರಿಗೆ ಮಾರ್ಗ ಮಾಡಿಕೊಟ್ಟಿದೆ. ಒಪ್ಪಂದದ ಪ್ರಕಾರ ಬಿಡುಗಡೆಗೊಳ್ಳಲಿರುವ ಒತ್ತೆಯಾಳುಗಳ ಹೆಸರನ್ನು ಹಸ್ತಾಂತರಿಸುವ ತನಕ ಗಾಝಾದಲ್ಲಿ ಹೋರಾಟ ಮುಂದುವರಿಸುವುದಾಗಿ ಇದಕ್ಕೂ ಮುನ್ನ ಇಸ್ರೇಲ್ ಘೋಷಿಸಿತ್ತು.