ಉತ್ತರ ಗಾಝಾಕ್ಕೆ ವಾಪಸಾಗಲು ಯತ್ನಿಸಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಸೈನಿಕರ ಗುಂಡಿನ ದಾಳಿ: ಇಬ್ಬರ ಸಾವು
Photo: NDTV
ದಿಯೆರ್ ಅಲ್-ಬಲಾಹ್ : ಸಂಘರ್ಷಪೀಡಿತ ಉತ್ತರ ಗಾಝಾಕ್ಕೆ ವಾಪಾಸಾಗಲು ಯತ್ನಿಸಿದ ಫೆಲೆಸ್ತೀನಿಯರ ಮೇಲೆ ಇಸ್ರೇಲಿ ಪಡೆಗಳು ಶುಕ್ರವಾರ ಗುಂಡುಹಾರಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ 11ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲಿ ಸೇನೆಯ ಗುಂಡಿಗೆ ಬಲಿಯಾದ ಫೆಲೆಸ್ತೀನ್ ನಾಗರಿಕರಿಬ್ಬರ ಮೃತದೇಹಗಳನ್ನು ದಕ್ಷಿಣ ಗಾಝಾದಲ್ಲಿರುವ ದಿಯೆರ್ ಅಲ್-ಬಲಾಹ್ ಆಸ್ಪತ್ರೆಗೆ ತರಲಾಗಿದೆಯೆಂದು ಎಪಿ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಲ್ಲಿ ಹೆಚ್ಚಿನವರಿಗೆ ಕಾಲಿಗೆ ಗುಂಡೇಟು ಬಿದ್ದಿರುವುದಾಗಿ ಅವರು ಹೇಳಿದ್ದಾರೆ.
ಸೇನಾ ಕಾರ್ಯಾಚರಣೆ ನಡೆಯುತ್ತಿರುವ ಉತ್ತರ ಗಾಝಾವನ್ನು ಪ್ರವೇಶಿಸದಂತೆ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿತ್ತು. ಆದರೆ ಕದನವಿರಾಮ ಘೋಷಣೆಯಾಗುತ್ತಿದ್ದಂತೆಯೇ ನೂರಾರು ಫೆಲೆಸ್ತೀನ್ ನಾಗರಿಕರು ಗಾಝಾಕ್ಕೆ ಹಿಂತಿರುಗಲು ಯತ್ನಿಸಿದ್ದರು. ಇದನ್ನು ತಡೆಯಲು ಇಸ್ರೇಲಿ ಸೈನಿಕರು ಗುಂಡಿನ ದಾಳಿಯನ್ನು ನಡೆಸಿದ್ದರೆನ್ನಲಾಗಿದೆ.
ಈ ಮಧ್ಯೆ ಇಸ್ರೇಲ್ ಸೇನೆ ದಕ್ಷಿಣ ಗಾಜಾದ ಮೇಲೆ ವಿಮಾನಗಳ ಮೂಲಕ ಕರಪತ್ರಗಳನ್ನು ವಿತರಿಸಿದ್ದು, ಉತ್ತರ ಗಾಝಾಕ್ಕೆ ಹಿಂತಿರುಗುವುದನ್ನು ನಿಷೇಧಿಸಲಾಗಿದೆ ಹಾಗೂ ಅಪಾಯಕರ ಎಂದು ಎಚ್ಚರಿಕೆ ನೀಡಿದೆ.