ಗಾಝಾದಲ್ಲಿ ಇಸ್ರೇಲ್ನಿಂದ ಯೋಜಿತ ನರಮೇಧ | ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ವರದಿಯಲ್ಲಿ ಉಲ್ಲೇಖ
ಸಾಂದರ್ಭಿಕ ಚಿತ್ರ | PC ; aljazeera.com
ಹೇಗ್ : ಕಳೆದ ವರ್ಷ ಯುದ್ಧ ಆರಂಭವಾದಂದಿನಿಂದ ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನರಮೇಧವನ್ನು ನಡೆಸುತ್ತಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಗುರುವಾರ ಆರೋಪಿಸಿದ್ದು ಈ ಕುರಿತ ವರದಿಯು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದಿದೆ.
ಇಸ್ರೇಲಿ ಸರಕಾರ ಮತ್ತು ಮಿಲಿಟರಿ ಅಧಿಕಾರಿಗಳ ಅಮಾನವೀಯ ಮತ್ತು ಜನಾಂಗೀಯ ವಿರೋಧಿ ಹೇಳಿಕೆಗಳನ್ನು, ವಿನಾಶದ ಚಿತ್ರಣ ಒದಗಿಸಿದ ಉಪಗ್ರಹದ ಚಿತ್ರಗಳು, ಕ್ಷೇತ್ರ ಕಾರ್ಯ ಮತ್ತು ಗಾಝಾದಿಂದ ಪ್ರತ್ಯಕ್ಷ ವರದಿಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಹಲವು ತಿಂಗಳುಗಳಿಂದ ಗಾಝಾದಲ್ಲಿ ಫೆಲಸ್ತೀನೀಯರನ್ನು ಮಾನವ ಹಕ್ಕುಗಳು ಮತ್ತು ಘನತೆಗೆ ಯೋಗ್ಯರಲ್ಲದ ಸಮುದಾಯ ಎಂದು ಇಸ್ರೇಲ್ ನಡೆಸಿಕೊಳ್ಳುತ್ತಿದ್ದು ಅವರನ್ನು ದೈಹಿಕವಾಗಿ ನಾಶಗೊಳಿಸುವ ಆಶಯವನ್ನು ಪ್ರದರ್ಶಿಸಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ಮುಖ್ಯಸ್ಥೆ ಆ್ಯಗ್ನೆಸ್ ಕ್ಯಾಲಮರ್ಡ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಹೇಗ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಲಮರ್ಡ್ `ಇದು ನರಹತ್ಯೆ, ಇದನ್ನು ಈಗಲೇ ತಡೆಯಬೇಕಿದೆ. ನಮ್ಮ ವರದಿಯು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 300 ಪುಟಗಳ ವರದಿಯಲ್ಲಿ ಹಮಾಸ್ನ ಉಪಸ್ಥಿತಿಯಿಲ್ಲದ ಸ್ಥಳದಲ್ಲಿ ನಡೆದ ದಾಳಿ ಅಥವಾ ಇತರ ಮಿಲಿಟರಿ ಗುರಿಗಳನ್ನು ಹೊರತುಪಡಿಸಿ ನಡೆದ ದಾಳಿಯ ಸಂದರ್ಭಗಳನ್ನು ಉಲ್ಲೇಖಿಸಲಾಗಿದೆ. 141 ಮಕ್ಕಳ ಸಹಿತ 334 ನಾಗರಿಕರ ಸಾವಿಗೆ ಕಾರಣವಾದ 2023ರ ಅಕ್ಟೋಬರ್ 7ರಿಂದ ಎಪ್ರಿಲ್ 20ರವರೆಗೆ ನಡೆದ 15 ವೈಮಾನಿಕ ದಾಳಿಗಳನ್ನು ವರದಿ ಉಲ್ಲೇಖಿಸಿದ್ದು `ಇದರಲ್ಲಿ ಯಾವುದೇ ದಾಳಿ ಮಿಲಿಟರಿ ಗುರಿಗಳನ್ನು ಉದ್ದೇಶಿಸಿ ನಡೆದಿರುವುದಕ್ಕೆ ಪುರಾವೆಗಳಿಲ್ಲ' ಎಂದಿದೆ.
ಸಾವಿರಾರು ಸಾವು-ನೋವು, ಮಾನಸಿಕ ಮತ್ತು ದೈಹಿಕ ಆಘಾತಗಳ ಜತೆಗೆ ಫೆಲೆಸ್ತೀನೀಯರಿಗೆ ಎದುರಾಗಿರುವ ಇತರ ಸಂಕಷ್ಟಗಳ ಬಗ್ಗೆಯೂ ವರದಿ ಗಮನ ಸೆಳೆದಿದೆ. ಫೆಲೆಸ್ತೀನೀಯರು ಅಪೌಷ್ಟಿಕತೆ, ಹಸಿವು ಮತ್ತು ರೋಗದ ಸಮಸ್ಯೆ ಎದುರಿಸಿದರು ಮತ್ತು ಅವರನ್ನು ನಿಧಾನಗತಿಯ, ಲೆಕ್ಕಾಚಾರದ ಸಾವಿನ ದವಡೆಗೆ ದೂಡಲಾಯಿತು. ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳು ವಿಶ್ವಸಂಸ್ಥೆಯ ಸಮಾವೇಶದ ಪ್ರಕಾರ ಜನಾಂಗೀಯ ಹತ್ಯೆಯನ್ನು ತಡೆಗಟ್ಟುವ ತಮ್ಮ ಬದ್ಧತೆಯನ್ನು ಉಲ್ಲಂಘಿಸಿವೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಸಂದರ್ಭ ಹಮಾಸ್ ನಡೆಸಿದ ಅಪರಾಧ ಕೃತ್ಯಗಳ ಬಗ್ಗೆಯೂ ವರದಿ ಪ್ರಕಟಿಸುವುದಾಗಿ ಆ್ಯಮ್ನೆಸ್ಟಿ ಹೇಳಿದೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಯಲ್ಲಿ 1,208 ಮಂದಿ ಸಾವನ್ನಪ್ಪಿದ್ದು ಇವರಲ್ಲಿ ಹೆಚ್ಚಿನವರು ನಾಗರೀಕರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಯುದ್ಧ ಆರಂಭಗೊಂಡಂದಿನಿಂದ ಗಾಝಾದಲ್ಲಿ ಕನಿಷ್ಠ 44,532 ಮಂದಿ ಸಾವನ್ನಪ್ಪಿದ್ದು ಇವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಗಾಝಾದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ವಿಶ್ವಾಸಾರ್ಹವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.