ಇಸ್ರೇಲ್ನ ನ್ಯಾಯಾಂಗ ಸುಧಾರಣೆ ಕಾನೂನನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
“ಇಸ್ರೇಲ್ನ ಪ್ರಜಾಪ್ರಭುತ್ವಕ್ಕೆ ಈ ಕಾನೂನಿನಿಂದ ಅಪಾಯ” ಎಂದ ಉನ್ನತ ನ್ಯಾಯಾಲಯ
ಸಾಂದರ್ಭಿಕ ಚಿತ್ರ (PTI)
ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಸರ್ಕಾರ ಜಾರಿಗೊಳಿಸಿದ್ದ ವಿವಾದಾತ್ಮಕ ನ್ಯಾಯಾಂಗ ಸುಧಾರಣೆ ಕಾನೂನೊಂದನ್ನು ಅಲ್ಲಿನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸರ್ಕಾರ ಜಾರಿಗೊಳಿಸಿದ್ದ ಕಾನೂನು ಅಲ್ಲಿನ ಹೈಕೋರ್ಟಿನ ಕೆಲವೊಂದು ಅಧಿಕಾರಗಳನ್ನು ಮೊಟಕುಗೊಳಿಸಿತ್ತಲ್ಲದೆ ಇದು ದೇಶಾದ್ಯಂತ ಪ್ರತಿಭಟನೆಗಳಿಗೂ ಕಾರಣವಾಗಿತ್ತು.
ಈ ಕಾನೂನುಗಳು ಇಸ್ರೇಲ್ನ ಪ್ರಜಾಪ್ರಭುತ್ವಕ್ಕೆ ಹಾನಿಯೆಸಗುವುದೆಂದು ಹೆಚ್ಚಿನ ನ್ಯಾಯಾಧೀಶರು ಅದನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನನ್ನು ರದ್ದುಗೊಳಿಸಲು 15 ನ್ಯಾಯಾಧೀಶರ ಪೈಕಿ 8 ಮಂದಿ ಒಲವು ತೋರಿಸಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜುಲೈ ತಿಂಗಳಲ್ಲಿ ಸರ್ಕಾರ ಜಾರಿಗೊಳಿಸಿದ ಈ ಕಾನೂನು ನೆತನ್ಯಾಹು ಮತ್ತು ಅವರ ಧಾರ್ಮಿಕ ಮತ್ತು ರಾಷ್ಟ್ರೀಯವಾದಿ ಮೈತ್ರಿಕೂಟದ ಪ್ರಸ್ತಾವಿತ ವಿಸ್ತಾರವಾದ ನ್ಯಾಯಾಂಗ ಬದಲಾವಣೆಗಳ ಭಾಗವಾಗಿತ್ತು.
ಸರಕಾರ ಮತ್ತು ಅದರ ಸಚಿವರ ನಿರ್ಧಾರಗಳನ್ನು ರದ್ದುಗೊಳಿಸುವ ಸುಪ್ರೀಂ ಕೋರ್ಟಿನ ಕೆಲವೊಂದು ಅಧಿಕಾರಗಳನ್ನು ಮೊಟಕುಗೊಳಿಸಿತ್ತಲ್ಲದೆ, ಸೂಕ್ತವಲ್ಲ ಎಂದು ಕೋರ್ಟ್ ಕಂಡುಕೊಂಡ ನಿರ್ಧಾರಗಳನ್ನು ರದ್ದುಗೊಳಿಸುವ ಅಧಿಕಾರವನ್ನೂ ಸರ್ಕಾರದ ಶಾಸನ ಸೆಳೆದಿತ್ತು.
ಆದರೆ ನ್ಯಾಯಾಲಯದ ತೀರ್ಮಾನವನ್ನು ನೆತನ್ಯಾಹು ಅವರ ಕಾನೂನು ಸಚಿವ ಯಾರಿನ್ ಲೆವಿನ್ ಟೀಕಿಸಿದ್ದಾರೆ. ಇದು ನಮ್ಮ ಸೈನಿಕರ ಯಶಸ್ಸಿಗೆ ಅಗತ್ಯವಾದ ಏಕತೆಯ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರಲ್ಲದೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ತಮ್ಮ ಉತ್ಸಾಹ ಕುಂದುವುದಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಮಾನವನ್ನು ದೇಶದ ವಿಪಕ್ಷಗಳು ಸ್ವಾಗತಿಸಿವೆ.