ಇಸ್ರೋದ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಉಡಾಯಿಸಿದ ಸ್ಪೇಸ್ ಎಕ್ಸ್
PC: x.com/InformedAlerts
ಫ್ಲೋರಿಡಾ: ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಮಂಗಳವಾರ ನಸುಕಿನಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಇಲ್ಲಿನ ಕೆನವೆರಲ್ ಸ್ಪೇಸ್ ಫೋರ್ಸ್ ಸ್ಟೇಷನ್ನಿಂದ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ರಾಕೆಟ್ ಮೂಲಕ ನಭಕ್ಕೆ ಕಳುಹಿಸಲಾಯಿತು.
ಇಸ್ರೋ ಮತ್ತು ಸ್ಪೇಸ್ ಎಕ್ಸ್ ನಡುವಿನ ಹಲವು ವಾಣಿಜ್ಯ ಸಹಭಾಗಿತ್ವ ಯೋಜನೆಗಳ ಪೈಕಿ ಇದು ಮೊಟ್ಟಮೊದಲನೇ ಯೋಜನೆಯಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ದುರೈರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿ, ಜಿಸ್ಯಾಟ್ ಎನ್2 ಅಥವಾ ಜಿಸ್ಯಾಟ್ 20 ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಸ್ಯಾಟ್ ಎನ್2 ಇಸ್ರೋದ ಉಪಗ್ರಹ ಕೇಂದ್ರ ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಂವಹನ ಉಪಗ್ರಹವಾಗಿದೆ. ಪ್ರತಿ ಸೆಕೆಂಡ್ ಗೆ 48 ಗಿಗಾಬೈಟ್ಸ್ ಪ್ರಸರಣ ಸಾಮರ್ಥ್ಯವನ್ನು ಹೊಂದಿದ್ದು, ಇದು ರಾಷ್ಟ್ರವ್ಯಾಪಿ ಬ್ರಾಡ್ ಬ್ಯಾಂಡ್ ಸೇವೆಗಳನ್ನು ವಿಸ್ತರಿಸಲು ಮತ್ತು ವಿಮಾನದೊಳಗೆ ಸಂಪರ್ಕವನ್ನು ಒದಗಿಸಲು ನೆರವಾಗಲಿದೆ.
ಇದು ಜಿಸ್ಯಾಟ್ ಸರಣಿಯ ಸಂವಹನ ಉಪಗ್ರಹಗಳ ಮುಂದುವರಿದ ಭಾಗವಾಗಿದ್ದು, ಡಾಟಾ ಪ್ರಸರಣ ಸಾಮರ್ಥ್ಯನ್ನು ಹೆಚ್ಚಿಸಲಿದೆ. ಜತೆಗೆ ಭಾರತದ ಸ್ಮಾರ್ಟ್ ಸಿಟಿ ಮಿಷನ್ ಗೆ ಅಗತ್ಯ ಸಂಪರ್ಕ ಮೂಲಸೌಕರ್ಯದ ವಿಸ್ತರಣೆಗೆ ಪೂರಕವಾಗಲಿದೆ. ಇದು 14 ವರ್ಷಗಳ ಕಾಲ ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ.