ಮಧ್ಯಪ್ರಾಚ್ಯ ಸಂಘರ್ಷ ವ್ಯಾಪಕಗೊಳ್ಳುವ ಅಪಾಯ : ಬ್ರಿಕ್ಸ್ ಶೃಂಗಸಭೆಯಲ್ಲಿ ಜೈಶಂಕರ್
ಎಸ್. ಜೈಶಂಕರ್ | PC : PTI
ಕಝಾನ್ : ಮಧ್ಯಪ್ರಾಚ್ಯದ ಘರ್ಷಣೆ ಈ ಪ್ರದೇಶದಲ್ಲಿ ಮತ್ತಷ್ಟು ಹರಡುವ ಆತಂಕ ವ್ಯಾಪಕವಾಗಿದೆ. ಸಂಘರ್ಷಗಳು ಮತ್ತು ಉದ್ವಿಗ್ನತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದ್ದಾರೆ.
ರಶ್ಯದ ಕಝಾನ್ನಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು `ಎರಡು ರಾಷ್ಟ್ರ ಪರಿಹಾರ ಸೂತ್ರಕ್ಕೆ ಪೂರಕವಾದ ನ್ಯಾಯೋಚಿತ ಮತ್ತು ಶಾಶ್ವತ ವಿಧಾನವನ್ನು ರೂಪಿಸಬೇಕು' ಎಂದು ಆಗ್ರಹಿಸಿದರು.
ʼಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ರಚಿಸಬೇಕಿದೆ. ಜಾಗತಿಕ ದಕ್ಷಿಣಕ್ಕಾಗಿ ಬ್ರಿಕ್ಸ್ ಧ್ವನಿ ಎತ್ತಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಮತ್ತು ಕಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು. ಹೆಚ್ಚು ಉತ್ಪಾದನಾ ಕೇಂದ್ರಗಳನ್ನು ರಚಿಸುವ ಮೂಲಕ ಜಾಗತಿಕ ಆರ್ಥಿಕತೆಯನ್ನು ಪ್ರಜಾಪ್ರಭುತ್ವಗೊಳಿಸಬೇಕು. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ ನೀಡುವ ಮೂಲಕ ಸಾಮಾನ್ಯ ಒಳಿತಿಗಾಗಿ ಸಾಮೂಹಿಕ ಪ್ರಯತ್ನವಾಗಬೇಕು' ಎಂದು ಜೈಶಂಕರ್ ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.