`ಕ್ವಾಡ್' ವಿದೇಶಾಂಗ ಸಚಿವರ ಜತೆ ಜೈಶಂಕರ್ ಮಾತುಕತೆ
Photo: X/sidhant
ನ್ಯೂಯಾರ್ಕ್ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ `ಕ್ವಾಡ್' ಸದಸ್ಯದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ನ ವಿದೇಶಾಂಗ ಸಚಿವರ ಜತೆ ಸಭೆ ನಡೆಸಿ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಹಾಗೂ ಸಾಮಾನ್ಯ ಕಾಳಜಿಯ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ವರದಿಯಾಗಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವೋಂಗ್ ಮತ್ತು ಜಪಾನ್ನ ವಿದೇಶಾಂಗ ಸಚಿವ ಯೊಕೊ ಕಮಿಕಾವ ಜತೆಗಿನ ಸಭೆಯ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ` ವಿಶ್ವಸಂಸ್ಥೆಗೆ ಅಚಲವಾದ ಬೆಂಬಲ, ಪರಸ್ಪರ ನಿರ್ಧರಿಸಿದ ನಿಯಮಗಳು, ರೂಢಿಗಳು ಮತ್ತು ಮಾನದಂಡಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆ ಮತ್ತು ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಕ್ವಾಡ್ ಸಹಕಾರವನ್ನು ದೃಢವಾಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದು ತಿಳಿಸಲಾಗಿದೆ.
ಬಳಿಕ ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ನಲೆದಿ ಪಂದೋರ್, ಬ್ರೆಝಿಲ್ ವಿದೇಶಾಂಗ ಸಚಿವ ಮೌರೊ ವಿಯೆರಾ, ಬಹ್ರೇನ್ ವಿದೇಶಾಂಗ ಸಚಿವ ಡಾ. ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ಝಯಾನಿಯವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು ಎಂದು ವರದಿಯಾಗಿದೆ.