ಜಪಾನ್ ಪರಮಾಣು ಸ್ಥಾವರದ ನೀರು ಬಿಡುಗಡೆ; ಚೀನಾದ ತೀವ್ರ ವಿರೋಧ
ಅಂತರಾಷ್ಟ್ರೀಯ ಪರಮಾಣು ಏಜೆನ್ಸಿ ಬೆಂಬಲ
Photo:NDTV
ಟೋಕಿಯೊ: ಫುಕುಶಿಮಾ ಪರಮಾಣು ಸ್ಥಾವರದ ತ್ಯಾಜ್ಯ ನೀರನ್ನು ಹೊರಬಿಡುವ ಕಾರ್ಯಕ್ಕೆ ಜಪಾನ್ ಗುರುವಾರ ಚಾಲನೆ ನೀಡಿದೆ. ಇದರಿಂದ ಯಾವುದೇ ಅಪಾಯವಿಲ್ಲ ಎಂದು ಜಪಾನ್ ಹೇಳಿದ್ದರೂ ಚೀನಾದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಜಪಾನ್ ಪೆಸಿಫಿಕ್ ಸಾಗರಕ್ಕೆ ಬಿಡುಗಡೆಗೊಳಿಸಲು ಪ್ರಾರಂಭಿಸಿದ ಪರಮಾಣು ಸ್ಥಾವರದ ತ್ಯಾಜ್ಯ ನೀರಿನಲ್ಲಿ ಟ್ರಿಟಿಯಂ ಸಾಂದ್ರತೆಯು ಕಾರ್ಯಾಚರಣೆಯ ಮಿತಿಗಿಂತ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಐಎಇಎ ಹೇಳಿದೆ.
540 ಒಲಿಂಪಿಕ್ ಈಜುಕೊಳದ ಸಾಮಥ್ರ್ಯದಷ್ಟು ಪ್ರಮಾಣದ ನೀರನ್ನು ಪೆಸಿಫಿಕ್ ಸರೋವರಕ್ಕೆ ವಿಸರ್ಜಿಸುವ ಮೂಲಕ ಸ್ಥಾವರದ ಅಪಾಯವನ್ನು ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸ್ಥಾವರವನ್ನು ನಿರ್ವಹಿಸುವ `ಟೆಪ್ಕೊ' ಹೇಳಿದೆ. ನೀರು ಬಿಡುಗಡೆಗೂ ಮುನ್ನ ಸುಮಾರು 100 ಜನರು `ಟೆಪ್ಕೊ' ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿದ್ದರು. `ಇದು ಸಾಗರಕ್ಕೆ ಪರಮಾಣು ಬಾಂಬ್ ಸುರಿದಂತೆ ಆಗಿದೆ. ವಿಶ್ವದಲ್ಲಿ ಪರಮಾಣು ಬಾಂಬ್ ದಾಳಿಯ ಪ್ರಥಮ ದಾಳಿಗೆ ಒಳಗಾದ ದೇಶದ ಪ್ರಧಾನಿ ಈ ನಿರ್ಧಾರ ತೆಗೆದುಕೊಂಡಿರುವುದು ವಿಷಾದನೀಯ' ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಸುನಾಮಿಯ ದುರಂತ
2011ರಲ್ಲಿ ಸುಮಾರು 18,000 ಮಂದಿಯ ಸಾವಿಗೆ ಕಾರಣವಾದ ತ್ಸುನಾಮಿಯ ಹಿನ್ನೆಲೆಯಲ್ಲಿ ಈಶಾನ್ಯ ಜಪಾನ್ನ ಫುಕುಶಿಮಾ ಅಣುಸ್ಥಾವರದ 3 ರಿಯಾಕ್ಟರ್ಗಳಿಗೆ ತೀವ್ರ ಹಾನಿಯಾಗಿತ್ತು. ಆ ಬಳಿಕ ಪ್ರತೀ ದಿನ ಸುಮಾರು 1 ಲಕ್ಷ ಲೀಟರ್ನಷ್ಟು ನೀರು(ಹಾಳಾದ ರಿಯಾಕ್ಟರ್ಗಳನ್ನು ತಂಪಾಗಿಸಲು ಬಳಸುವ ನೀರು. ಅಂತರ್ಜಲ ಮತ್ತು ಮಳೆನೀರು ಒಳಹರಿವಿನಿಂದ ಕಲುಷಿತಗೊಂಡ ನೀರು) ಈ ಸ್ಥಾವರದಲ್ಲಿ ಸಂಗ್ರಹವಾಗುತ್ತಿದ್ದು ಈಗ ಸುಮಾರು 1.34 ದಶಲಕ್ಷ ಟನ್ಗಳಷ್ಟು ನೀರು ಶೇಖರಣೆಯಾಗಿದ್ದು ಇನ್ನಷ್ಟು ನೀರಿಗೆ ಸ್ಥಳಾವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಥಾವರದಿಂದ 1 ಕಿ.ಮೀ ದೂರದವರೆಗೆ ಪೈಪ್ಲೈನ್ ಹಾಕಿ ಪ್ರತೀ ದಿನ ಸುಮಾರು 5 ಲಕ್ಷ ಲೀಟರ್ನಷ್ಟು ನೀರನ್ನು ಸಾಗರಕ್ಕೆ ಸಾಗಿಸುವುದಾಗಿ 2021ರಲ್ಲಿ ಜಪಾನ್ ಘೋಷಿಸಿತ್ತು. ತ್ಯಾಜ್ಯ ನೀರಿನಲ್ಲಿರುವ ಎಲ್ಲಾ ವಿಕಿರಣ ಅಂಶಗಳನ್ನು ತೆಗೆದುಹಾಕಿದ ಬಳಿಕ ನೀರನ್ನು ಬಿಡುಗಡೆಗೊಳಿಸಲಾಗುತ್ತದೆ. ಇದು ರಾಷ್ಟ್ರೀಯ ಸುರಕ್ಷಾ ಮಾನದಂಡದ ಪ್ರಮಾಣಕ್ಕಿಂತಲೂ ಕಡಿಮೆಯಾಗಿರುತ್ತದೆ. 2024ರ ಮಾರ್ಚ್ವರೆಗೆ ತ್ಯಾಜ್ಯ ನೀರು ಬಿಡುಗಡೆಯಾಗಲಿದೆ ಎಂದು ಟೆಪ್ಕೊ ಹೇಳಿದೆ.