ಇಸ್ರೇಲ್ ಬೆಂಬಲಿಸುವ ಹೇಳಿಕೆಗೆ ಸಹಿ ಹಾಕದ ಜಿ7 ಅಧ್ಯಕ್ಷ ಜಪಾನ್
ಟೋಕಿಯೊ: ಶನಿವಾರ ಗಾಝಾದಿಂದ ಇಸ್ರೇಲ್ ನತ್ತ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯನ್ನು ಖಂಡಿಸುವ ಮತ್ತು ಇಸ್ರೇಲನ್ನು ಬೆಂಬಲಿಸುವ ಜಿ7 ಗುಂಪಿನ ಜಂಟಿ ಹೇಳಿಕೆಗೆ ಸಹಿ ಹಾಕದಿರಲು ಜಪಾನ್ ಮತ್ತು ಕೆನಡಾ ನಿರ್ಧರಿಸಿದೆ ಎಂದು ವರದಿಯಾಗಿದೆ.
ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್, ಜರ್ಮನ್ ಛಾನ್ಸಲರ್ ಒಲಾಫ್ ಶ್ಹಾಲ್ಝ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಂಟಿ ಹೇಳಿಕೆ ಸಹಿ ಹಾಕಿದ್ದರು. ಆದರೆ ಜಿ7 ಗುಂಪಿನ ಹಾಲಿ ಅಧ್ಯಕ್ಷ ಜಪಾನ್ ಮತ್ತು ಸದಸ್ಯ ಕೆನಡಾ ಸಹಿ ಹಾಕದಿರಲು ನಿರ್ಧರಿಸಿವೆ.
ಹಮಾಸ್ ನ ಭೀಕರ ಕೃತ್ಯವನ್ನು ಖಂಡಿಸುವುದಾಗಿ ಮತ್ತು ಇಸ್ರೇಲ್ ದೇಶಕ್ಕೆ ತಮ್ಮ ದೃಢ ಮತ್ತು ಒಗ್ಗಟ್ಟಿನ ಬೆಂಬಲವನ್ನು ಮುಂದುವರಿಸುವುದಾಗಿ 5 ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ. `ಜತೆಗೆ ಫೆಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಗುರುತಿಸುತ್ತೇವೆ. ಆದರೆ ಹಮಾಸ್ ಈ ಆಶಯಗಳನ್ನು ಪ್ರತಿನಿಧಿಸುವುದಿಲ್ಲ' ಎಂದು ಒತ್ತಿ ಹೇಳಲಾಗಿದೆ.
ಹೇಳಿಕೆಗೆ ಸಹಿ ಹಾಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಪಾನ್ ಸಂಪುಟದ ಪ್ರಧಾನ ಕಾರ್ಯದರ್ಶಿ ಹಿರೊಕಝು ಮಟ್ಸುನೊ `ನಾವು ಮಧ್ಯಸ್ಥಿಕೆ ವಹಿಸಲು ಮತ್ತು ಫೆಲೆಸ್ತೀನ್ ಹಾಗೂ ಇಸ್ರೇಲ್ ಎರಡರ ಮೇಲೂ ಪ್ರಭಾವ ಬೀರಲು ತೆರೆಮರೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸ್ಥಿತಿ ಉಲ್ಬಣಗೊಳ್ಳದಂತೆ ಮತ್ತು ಪರಿಸ್ಥಿತಿಗೆ ಶಾಂತಿಯುತ ಪರಿಹಾರ ಹುಡುಕಲು ಜಪಾನ್ ಪ್ರಯತ್ನಿಸುತ್ತದೆ' ಎಂದಿದ್ದಾರೆ.