ಸೌರ ವ್ಯವಸ್ಥೆಯಲ್ಲಿ ಭೂಮಿಯಂತಹ ಗ್ರಹ ಪತ್ತೆ ಮಾಡಿದ ಜಪಾನ್ ವಿಜ್ಞಾನಿಗಳು
Photo: twitter.com/nextbigfuture
ಟೋಕಿಯೊ: ಜಪಾನಿನ ಇಬ್ಬರು ಬಾಹ್ಯಾಕಾಶ ವಿಜ್ಞಾನಿ ಗಳು ನಮ್ಮ ಸೌರ ವ್ಯವಸ್ಥೆಯಲ್ಲಿ ಭೂಮಿಯಂತಹ ಮತ್ತೊಂದು ಗ್ರಹ ಇರುವ ಬಗ್ಗೆ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಈ ಗ್ರಹ ಕ್ಯೂಪೆರ್ ಬೆಲ್ಟ್ ನಲ್ಲಿ ಇದೆ ಎಂದು ಅಂದಾಜಿಸಲಾಗಿದ್ದು, ಇದು ಹೊರ ಸೌರ ವ್ಯವಸ್ಥೆಯಲ್ಲಿರುವ ವಸ್ತುಗಳಿಂದ ಸಂಯೋಜಿಸಲ್ಪಟ್ಟ ವೃತ್ತಾಕಾರದ ಡಿಸ್ಕ್ ನಂತಿದೆ. ಇದು ನೆಫ್ಚೂನ್ ನ ಕಕ್ಷೆಗಿಂತ ಹೊರಗಿದೆ. ಗ್ರಹಗಳಂತೆ ಕ್ಯೂಪೆರ್ ಬೆಲ್ಟ್ ನಲ್ಲಿರುವ ವಸ್ತುಗಳು ಕೂಡಾ ಸೂರ್ಯನ ಸುತ್ತ ಪರಿಭ್ರಮಿಸುತ್ತವೆ.
"ಭೂಮಿಯಂತಹ ಗ್ರಹದ ಅಸ್ತಿತ್ವ ಇದೆ ಎಂಬ ಅಂದಾಜು ನಮ್ಮದು" ಎಂದು ಜಪಾನಿನ ಸಂಶೋಧಕರು ಹೇಳಿದ್ದಾರೆ. "ಈ ಆದಿ ಸ್ವರೂಪದ ಗ್ರಹ ಸೌರ ವ್ಯವಸ್ಥೆಯ ಆರಂಭಿಕ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಇತರ ವಸ್ತುಗಳಾದ ಕೆಬಿಪಿಯಂತೆ ಕ್ಯೂಪರ್ ಬೆಲ್ಟ್ ನ ದೂರದಲ್ಲಿದೆ" ಎಂದು ವಿವರಿಸಿದ್ದಾರೆ.
ಅವರ ಸಂಶೋಧನಾ ಪ್ರಬಂಧವನ್ನು ಆಸ್ಟ್ರೋನಾಮಿಕಲ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದ್ದು, ಒಸಾಕಾದ ಕಿಂಡೈ ವಿಶ್ವವಿದ್ಯಾನಿಲಯದ ಪ್ಯಾಟ್ರಿಲ್ ಸೋಫೀಯಾ ಲೈಕ್ವಾ ಮತ್ತು ಟೋಕಿಯೊದಲ್ಲಿರುವ ನ್ಯಾಷನಲ್ ಆಸ್ಟ್ರೋನಾಮಿಕಲ್ ಒಬ್ಸರ್ವೇಟರಿಯ ತಕಾಶಿ ಇಟೊ ಅವರ ಪ್ರಕಾರ, ಈ ಹೊಸ ಗ್ರಹ ಅಸ್ತಿತ್ವದಲ್ಲಿ ಇರುವುದೇ ನಿಜವಾದರೆ ಭೂಮಿಯ ಗಾತ್ರಕ್ಕಿಂತ 1.5 ರಿಂದ 3 ಪಟ್ಟು ದೊಡ್ಡದು.
ಕಳೆದ ಕೆಲ ದಶಕಗಳಲ್ಲಿ, ಸೌರ ವ್ಯವಸ್ಥೆಯ ಹೊರ ವರ್ತುಲದಲ್ಲಿ ಗ್ರಹಗಳ ಅಸ್ತಿತ್ವ ಇರುವ ಸಾಧ್ಯತೆಗಳ ಬಗ್ಗೆ ಹಲವು ಅಧ್ಯಯನಗಳು ನಡೆದಿದ್ದು, ಪ್ಲಾನೆಟ್ ನೈನ್ ಎಂಬ ಗ್ರಹ ಇರುವ ಸಾಧ್ಯತೆಗಳ ಬಗ್ಗೆ ಸೈದ್ಧಾಂತಿಕ ನಿರ್ಧಾರಕ್ಕೆ ಬಂದಿದ್ದವು. ಈ ಅಧ್ಯಯನವು ಕ್ಯೂಪೆರ್ ಬೆಲ್ಟ್ ನ ನಿಕಟ ಪ್ರದೇಶದಲ್ಲೇ ಈ ಗ್ರಹ ಇರುವ ಸಾಧ್ಯತೆಯನ್ನು ಸ್ಪಷ್ಟಪಡಿಸಿದೆ.