ಜೋ ಬೈಡನ್ ಪುತ್ರನ ವಿರುದ್ಧ ಅಪರಾಧ ದೋಷಾರೋಪ
Photo: Twitter
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ ಅಕ್ರಮವಾಗಿ ಬಂದೂಕು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಇತ್ಯರ್ಥ ಪ್ರಯತ್ನ ವಿಫಲವಾಗಿದ್ದು, ಇದೀಗ ಅವರ ವಿರುದ್ಧ ಅಪರಾಧ ಪ್ರಕರಣ ವಿಚಾರಣೆ ಆರಂಭವಾಗಲಿದೆ. ಹಾಲಿ ಅಧಿಕಾರದಲ್ಲಿರುವ ಅಧ್ಯಕ್ಷರ ಮಗನ ವಿರುದ್ಧ ವಿಚಾರಣೆ ಪ್ರಕ್ರಿಯೆ ಆರಂಭವಾಗಿರುವುದು ಇದೇ ಮೊದಲು. ಅಮೆರಿಕದ ಡೆಲವೇರ್ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಮೂರು ಅಪರಾಧ ಅಂಶಗಳನ್ನು ಆಧರಿಸಿ ಹಂಟರ್ ವಿರುದ್ಧ ದೋಷಾರೋಪ ಮಾಡಲಾಗಿದೆ.
ಹಂಟರ್ ಬೈಡನ್ ಅವರ ವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಮೆರಿಕದ ವಿಶೇಷ ಅಭಿಯೋಜಕ ಡೇವಿಡ್ ವೀಸ್ ಅವರು ಈ ಆರೋಪಗಳನ್ನು ಮಾಡಿದ್ದರು. ಈ ಆರೋಪ 2024ರ ಅಧ್ಯಕ್ಷೀಯ ಅಭಿಯಾನಕ್ಕೆ ವಿಶೇಷ ನಾಟಕೀಯ ಲೇಪ ನೀಡಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೇನ್, ತಮ್ಮ ಕಟ್ಟಾ ಎದುರಾಳಿ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೆ ಕಣಕ್ಕೆ ಧುಮುಕುವ ನಿರೀಕ್ಷೆ ಇದೆ.
ಟ್ರಂಪ್ ಮತ್ತು ರಿಪಬ್ಲಿಕನ್ನರು ಹಲವು ವರ್ಷಗಳಿಂದ ಹಂಟರ್ ಬೈಡೇನ್ ಅವರನ್ನು ಗುರಿ ಮಾಡಿದ್ದಾರೆ. ಉಕ್ರೇನ್, ಚೀನಾ ಮತ್ತು ಇತರ ವಿಷಯಗಳಿಗೆ ಸಮಬಂಧಿಸಿದಂತೆ ಪ್ರಮಾದ ಎಸಗಿದ ಆರೋಪ ಎದುರಿಸುತ್ತಿದ್ದರು. ಲಾಬಿ ಮಾಡುವುದು, ಕಾನೂನು, ಬ್ಯಾಂಕಿಂಗ್ ಹಾಗೂ ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು, ಮಾದಕ ವಸ್ತು ದುರ್ಬಳಕೆ ವಿರುದ್ಧದ ತಮ್ಮ ಹೋರಾಟವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.