ಸಾಮಾಜಿಕ ಮಾಧ್ಯಮದಲ್ಲಿನ ಗಾಝಾ ಪರ ಪೋಸ್ಟ್ ಗಾಗಿ ಕೆಲಸದಿಂದ ವಜಾ; ಎಬಿಸಿ ವಿರುದ್ಧ ಮೊಕದ್ದಮೆ ದಾಖಲಿಸಿದ ಪತ್ರಕರ್ತೆ ಅ್ಯಂಟೊಯ್ನೆಟ್ ಲ್ಯಾಟೌಫ್
Photo: Antoinette Lattouf
ಸಿಡ್ನಿ: ಗಾಝಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮ್ಮನ್ನು ಅನ್ಯಾಯಯುತವಾಗಿ ನೌಕರಿಯಿಂದ ವಜಾಗೊಳಿಸಿರುವ ಆಸ್ಟ್ರೇಲಿಯನ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ವಿರುದ್ಧ ಮೊಕದ್ದಮೆ ಹೂಡಲು ಪತ್ರಕರ್ತೆ ಆ್ಯಂಟೊಯ್ನೆಟ್ ಲ್ಯಾಟೌಫ್ ನಿರ್ಧರಿಸಿದ್ದಾರೆ. ಅವರು ಎಬಿಸಿ ಸಂಸ್ಥೆಯಲ್ಲಿನ ಏಕೈಕ ಅರಬ್-ಆಸ್ಟ್ರೇಲಿಯಾ ಸಂಜಾತೆ ವರದಿಗಾರ್ತಿಯಾಗಿದ್ದು, ಆಕೆಯನ್ನು ಆಕೆಯ ಜನಾಂಗೀಯ ಹಿನ್ನೆಲೆಯ ಕಾರಣಕ್ಕೆ ನೌಕರಿಯಿಂದ ವಜಾಗೊಳಿಸಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ ಎಂದು jantakareporter.com ವರದಿ ಮಾಡಿದೆ.
ಲ್ಯಾಟೌಫ್ ಅವರನ್ನು ಬೆಳಗಿನ ಕಾರ್ಯಕ್ರಮದ ನೇರ ಪ್ರಸ್ತುತಕಾರ್ತಿಯಾಗಿ ಆಸ್ಟ್ರೇಲಿಯಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಡಿಸೆಂಬರ್ ತಿಂಗಳಲ್ಲಿ ಒಂದು ವಾರದ ಕಾಲಕ್ಕೆ ನೇಮಕ ಮಾಡಿಕೊಂಡಿತ್ತು. ಡಿಸೆಂಬರ್ 20ರಂದು ತಮ್ಮ ಕೊನೆಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದ ಆಕೆ, ಒಂದು ದಿನದ ನಂತರ ಮರಳಿ ಬರುವುದಾಗಿ ತಮ್ಮ ವೀಕ್ಷಕರಿಗೆ ತಿಳಿಸಿದ್ದರು. ಆದರೆ, ಅದೇ ದಿನ ಮಧ್ಯಾಹ್ನದಂದು ಆಕೆಯ ಮೇಲಧಿಕಾರಿಗಳು, ಆಕೆಯನ್ನು ವಜಾಗೊಳಿಸಿರುವ ಸುದ್ದಿಯನ್ನು ಆಕೆಗೆ ತಿಳಿಸಿದ್ದಾರೆ. ಆಕೆಯ ಪ್ರಕಾರ, ತಮ್ಮನ್ನು ವಜಾಗೊಳಿಸುವ ನಿರ್ಧಾರವು ಉನ್ನತಾಧಿಕಾರಿಗಳಿಂದ ಬಂದಿದೆ ಎಂದು ಹೇಳಲಾಗಿದೆ.
ಎಬಿಸಿ ಸಂಸ್ಥೆಯ ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನು ಲ್ಯಾಟೌಫ್ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ. ಬಿಬಿಸಿ ಸುದ್ದಿ ಸಂಸ್ಥೆಯ ಪ್ರಕಾರ, ಇಸ್ರೇಲ್-ಗಾಝಾ ನಡುವಿನ ಯುದ್ಧದ ಕುರಿತು ಹ್ಯೂಮನ್ ರೈಟ್ಸ್ ವಾಚ್ ಮಾಡಿದ್ದ ಪೋಸ್ಟ್ ಅನ್ನು ಲ್ಯಾಟೌಫ್ ರೀಪೋಸ್ಟ್ ಮಾಡಿದ ಕಾರಣಕ್ಕಾಗಿ ಆಕೆಯನ್ನು ವಜಾಗೊಳಿಸಲಾಗಿದೆ ಎಂದು ಎಬಿಸಿ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.
ಹ್ಯೂಮನ್ ವಾಚ್ ರೈಟ್ಸ್ ವಾಚ್ ಸಂಸ್ಥೆಯು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ, “ಗಾಝಾದಲ್ಲಿನ ನಾಗರಿಕರು ಹಸಿವಿನಿಂದ ನರಳುವುದನ್ನು ಇಸ್ರೇಲ್ ಸರ್ಕಾರ ತನ್ನ ಯುದ್ಧಾಸ್ತ್ರವನ್ನಾಗಿಸಿಕೊಂಡಿದೆ. ಇದು ಯುದ್ಧಾಪರಾಧವಾಗಿದೆ” ಎಂದು ಆರೋಪಿಸಿತ್ತು.
“ಎಬಿಸಿ ಸಂಸ್ಥೆಯು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯನ್ನು ಆಧರಿಸಿ ವರದಿ ಮಾಡಿದ ನಂತರ ಎಬಿಸಿಯ ಇತರ ನೌಕರರೂ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಆದರೆ, ಅವರಿಗೂ ನನಗೂ ಇರುವ ವ್ಯತ್ಯಾಸವೆಂದರೆ, ಅವರು ಬಿಳಿಯರು ಹಾಗೂ ನಾನು ಅರಬ್ ಹಿನ್ನೆಲೆಯವಳು” ಎಂದು 40 ವರ್ಷದ ಪತ್ರಕರ್ತೆ ಲ್ಯಾಟೌಫ್ ಹೇಳಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಬಿಸಿ ಸಂಸ್ಥೆ ವಿರುದ್ಧದ ಕಾನೂನು ಹೋರಾಟದ ಶುಲ್ಕಕ್ಕಾಗಿ ಲ್ಯಾಟೌಫ್ ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದು, ಅವರು ಈಗಾಗಲೇ 97,895 ಆಸ್ಟ್ರೇಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.