ಗಾಝಾ ಕುರಿತು ಇಸ್ರೇಲ್ನ ಏಳು ಸುಳ್ಳುಗಳನ್ನು ಬಯಲಿಗೆಳೆದ ಪತ್ರಕರ್ತ ಮೆಹ್ದಿ ಹಸನ್
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಖ್ಯಾತ ಪತ್ರಕರ್ತ ಮೆಹ್ದಿ ಹಸನ್ ಅವರು ನೂತನ ಸುದ್ದಿ ಜಾಲತಾಣ ‘Zeteo’ದಲ್ಲಿ ‘Debunked’ ಶೀರ್ಷಿಕೆಯಡಿ ವೀಡಿಯೊ ಸರಣಿಯೊಂದನ್ನು ಆರಂಭಿಸಿದ್ದಾರೆ. ಮೊದಲ ವೀಡಿಯೊದಲ್ಲಿ ಅವರು ಗಾಝಾಕ್ಕೆ ಸಂಬಂಧಿಸಿದಂತೆ ತಪ್ಪುದಾರಿಗೆಳೆಯುವ ಇಸ್ರೇಲ್ ನ ಅಪಪ್ರಚಾರವನ್ನು ಬಯಲಿಗೆಳೆದಿದ್ದಾರೆ.
ಹಸನ್ ಮುಖ್ಯವಾಹಿನಿ ಮಾಧ್ಯಮಗಳು ಕಡೆಗಣಿಸಿರುವ ಈ ‘ಅಪಾಯಕಾರಿ ಸುಳ್ಳು’ಗಳನ್ನು ಬಹಿರಂಗಗೊಳಿಸುವ ಅಗತ್ಯವನ್ನು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
‘ನಮ್ಮ ಮಾಧ್ಯಮ ಕ್ಷೇತ್ರದಲ್ಲಿಯ ಇತರರು ಮಾಡದಿದ್ದರೂ ಈ ಅಪಾಯಕಾರಿ ಸುಳ್ಳುಗಳನ್ನು ನಾವು ಹೊರಗೆಳೆಯಲೇಬೇಕು’ ಎಂದು ಬರೆದಿರುವ ಹಸನ್, ಗಾಝಾ ಮತ್ತು ಅ.7ರ ಕುರಿತು ಪ್ರಮುಖ ಏಳು ಸುಳ್ಳುಗಳನ್ನು ಬಯಲಿಗೆಳೆಯಲು ತನ್ನ ನೂತನ ವೀಡಿಯೊ ಸರಣಿಯು ಮೀಸಲಾಗಿದೆ ಎಂದು ಹೇಳಿದ್ದಾರೆ.
1. ಕದನ ವಿರಾಮ ಉಲ್ಲಂಘನೆ ಆರೋಪ
ಅಸ್ತಿತ್ವದಲ್ಲಿದ್ದ ಕದನ ವಿರಾಮವನ್ನು ಹಮಾಸ್ ಅ.7ರಂದು ಉಲ್ಲಂಘಿಸಿತ್ತು ಎಂದು ಇಸ್ರೇಲ್ ಪದೇಪದೇ ಮಾಡಿದ್ದ ಪ್ರತಿಪಾದನೆಯನ್ನು ಪ್ರಶ್ನಿಸುವ ಮೂಲಕ ಹಸನ್ ಆರಂಭಿಸಿದ್ದಾರೆ. ಇಸ್ರೇಲಿ ನಾಯಕರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಅ.7ಕ್ಕೆ ಎರಡು ವಾರಗಳ ಮೊದಲು ಗಾಝಾದಲ್ಲಿ ಇಸ್ರೇಲಿ ದಾಳಿಗಳನ್ನು ವರದಿ ಮಾಡಿದ್ದ ಎಪಿ ನ್ಯೂಸ್ನ ಸುದ್ದಿ ಲೇಖನಗಳನ್ನು ಹಸನ್ ಉಲ್ಲೇಖಿಸಿದ್ದಾರೆ, ಇದು ಹಗೆತನ ಮುಂದುವರಿದಿತ್ತು ಎನ್ನುವುದನ್ನು ಸೂಚಿಸುತ್ತದೆ.
ಅ.7ರ ದಾಳಿಗೆ ಎರಡು ವಾರಗಳ ಮುನ್ನ ಎಪಿ ನ್ಯೂಸ್ ವರದಿಗಳನ್ನು ಪ್ರಕಟಿಸಿತ್ತು ಎಂದು ಹಸನ್ ಹೇಳಿದ್ದಾರೆ. ಗಾಝಾ ಪಟ್ಟಿಯ ಪ್ರತಿಭಟನಾಕಾರರ ಕಣಕಾಲುಗಳಿಗೆ ಗುಂಡಿನ ಗಾಯಗಳಾಗಿದ್ದವು ಒಂದು ವರದಿ ಹೇಳಿದ್ದರೆ,ಈ ವರ್ಷ (2023) ದಲ್ಲಿ ಈಗಾಗಲೇ ಇಸ್ರೇಲಿ ಪಡೆಗಳು ಪಶ್ಚಿಮ ದಂಡೆಯಲ್ಲಿ 234 ಫೆಲೆಸ್ತೀನಿಗಳನ್ನು ಕೊಂದಿದ್ದಾರೆ, ವಸಾಹತುಗಾರರು ಇನ್ನೂ ಒಂಬತ್ತು ಹತ್ಯೆಗಳಿಗೆ ಹೊಣೆಯಾಗಿದ್ದಾರೆ ಎಂದು ಇನ್ನೊಂದು ವರದಿಯು ತಿಳಿಸಿತ್ತು.ಅ.7ಕ್ಕೆ ಮೊದಲೂ ಕದನ ವಿರಾಮ ಅಸ್ತಿತ್ವದಲ್ಲಿದ್ದರೂ ಯಾರೂ ಆ ಬಗ್ಗೆ ಇಸ್ರೇಲಿ ಸೇನೆಗೆ ತಿಳಿಸಿರಲಿಲ್ಲ ಎಂದು ಹಸನ್ ಅಣಕವಾಡಿದ್ದಾರೆ.
2. ಒತ್ತೆಯಾಳು ಆದ್ಯತೆ
ಹಸನ್ ಪ್ರಕಾರ ಇನ್ನೊಂದು ಸುಳ್ಳು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಆದ್ಯತೆಗೆ ಸಂಬಂಧಿಸಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅದನ್ನು ‘ಪ್ರಮುಖ ಆದ್ಯತೆ’ ಎಂದು ಒತ್ತಿ ಹೇಳಿದ್ದರೆ ವರದಿಯಂತೆ ಇಸ್ರೇಲ್ನ ಹಣಕಾಸು ಸಚಿವರು, ಒತ್ತೆಯಾಳುಗಳ ವಿಮೋಚನೆಗಿಂತ ಹಮಾಸ್ ಅನ್ನು ನಾಶಗೊಳಿಸುವುದು ಮುಖ್ಯ ಆದ್ಯತೆಯಾಗಿದೆ ಎಂದು ಹೇಳಿದ್ದರು. ಇಸ್ರೇಲಿ ವಾಯುದಾಳಿಗಳು ಇಸ್ರೇಲಿ ಒತ್ತೆಯಾಳುಗಳ ಸಾವಿಗೆ ಕಾರಣವಾಗಿದ್ದವು ಎಂದು ಆರೋಪಿಸಿರುವ ಹಸನ್, ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ಕಥನವನ್ನು ಪ್ರಶ್ನಿಸಿದ್ದಾರೆ.
ತಿಳಿದೋ ಅಥವಾ ತಿಳಿಯದೆಯೋ ಇಸ್ರೇಲಿ ಸೇನೆಯು ತನ್ನ ಸೈನಿಕರು ರಕ್ಷಿಸಿದ್ದಕ್ಕಿಂತ ಹೆಚ್ಚಿನ ಒತ್ತೆಯಾಳುಗಳ ಹತ್ಯೆ ಮಾಡಿದೆ ಎಂದಿರುವ ಹಸನ್,ಇಸ್ರೇಲಿ ವೆಬ್ಸೈಟ್ವೊಂದನ್ನು ಶೇರ್ ಮಾಡಿಕೊಂಡಿದ್ದ ಇಸ್ರೇಲಿ ಪತ್ರಕರ್ತನೋರ್ವನ ಟ್ವೀಟ್ನ್ನು ಉಲ್ಲೇಖಿಸಿದ್ದಾರೆ. ಗಾಝಾದಲ್ಲಿ ಇಸ್ರೇಲ್ನ ವಾಯುದಾಳಿಗಳಲ್ಲಿ 10 ಇಸ್ರೇಲಿ ಒತ್ತೆಯಾಳುಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ವೆಬ್ಸೈಟ್ ಹೇಳಿತ್ತು. ತಾನು ಗುರಿಯಾಗಿಸಿಕೊಂಡಿದ್ದ ಕಟ್ಟಡಗಳಲ್ಲಿ ಕೆಲವು ಒತ್ತೆಯಾಳುಗಳು ವಾಸವಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಇಸ್ರೇಲಿ ಸೇನೆಯ ಬಳಿಯಿತ್ತು ಎಂದೂ ಅದು ತಿಳಿಸಿತ್ತು. ಹಸನ್ ಪ್ರಕಾರ ಇಸ್ರೇಲಿ ಸೇನೆಯು ತನ್ನದೇ ಪ್ರಜೆಗಳನ್ನು ಕೊಂದಿತ್ತು ಮತ್ತು ಅವರು ಹಮಾಸ್ನ ಒತ್ತೆಸೆರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳಿತ್ತು.
3. 40 ಶಿಶುಗಳ ಶಿರಚ್ಛೇದನ ಹೇಳಿಕೆ
ಇಸ್ರೇಲ್ನ ಅತ್ಯಂತ ಭಾವನಾತ್ಮಕ ಮತ್ತು ಆಕ್ರಮಣಕಾರಿ ಸುಳ್ಳನ್ನು ಹಸನ್ ಬಯಲಿಗೆಳೆದಿದ್ದಾರೆ. ಹಮಾಸ್ನ ಅ.7ರ ದಾಳಿ ಸಂದರ್ಭದಲ್ಲಿ 40 ಶಿರಚ್ಛೇದಿತ ಶಿಶುಗಳ ಶವಗಳು ಪತ್ತೆಯಾಗಿವೆ ಎಂದು ವ್ಯಾಪಕವಾಗಿ ಪ್ರಸಾರಗೊಂಡಿದ್ದ ಹೇಳಿಕೆಯ ಹಿನ್ನೆಲೆಯನ್ನು ಜಾಲಾಡಿರುವ ಹಸನ್ ಅದನ್ನು ಸಿನಿಕತನದ, ಹೇವರಿಕೆ ಹುಟ್ಟಿಸುವ ಕಟ್ಟುಕಥೆ ಎಂದು ತಳ್ಳಿಹಾಕಿದ್ದಾರೆ. ಇಂತಹ ದುಷ್ಕೃತ್ಯ ನಡೆದಿದ್ದನ್ನು ಅಲ್ಲಗಳೆದಿರುವ ಪುರಾವೆಗಳನ್ನು ಅವರು ಉಲ್ಲೇಖಿಸಿದ್ದಾರೆ. ನೂರಾರು ಫೆಲೆಸ್ತೀನಿ ಶಿಶುಗಳ ಹತ್ಯೆಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಈ ಕಟ್ಟುಕಥೆಯನ್ನು ಹರಡಿತ್ತು ಎಂದಿದ್ದಾರೆ.
4. ಅಲ್ ಶಿಫಾ ಆಸ್ಪತ್ರೆ ಕುರಿತು ಇಸ್ರೇಲಿ ಸೇನೆಯ ಹೇಳಿಕೆ
ಅಲ್ ಶಿಫಾ ಆಸ್ಪತ್ರೆಯ ತಳ ಅಂತಸ್ತಿನಲ್ಲಿ ಹಮಾಸ್ನ ಕೇಂದ್ರ ಕಚೇರಿಯಿದೆ ಎಂಬ ಇಸ್ರೇಲ್ನ ಇನ್ನೊಂದು ಸುಳ್ಳನ್ನು ಹಸನ್ ಬಯಲಿಗೆಳೆದಿದ್ದಾರೆ. ಈ ಬಗ್ಗೆ ದೃಢವಾದ ಪುರಾವೆಗಳನ್ನು ಒದಗಿಸುವಲ್ಲಿ ಇಸ್ರೇಲಿ ಸೇನೆಯು ವಿಫಲಗೊಂಡಿತ್ತು ಮತ್ತು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಬಳಕೆಯಲ್ಲಿಲ್ಲದ ಕೊಠಡಿಯೊಂದರಲ್ಲಿ ಎರಡು ಮಂಚಗಳಂತಹ ಅಸ್ಪಷ್ಟ ವಿವರಗಳನ್ನು ನೆಚ್ಚಿಕೊಂಡಿತ್ತು ಎಂದು ಅವರು ವಾದಿಸಿದ್ದಾರೆ.
ಹಮಾಸ್ ಆಸ್ಪತ್ರೆಯನ್ನು ಮಿಲಿಟರಿ ಉದ್ದೇಶಗಳಿಗಾಗಿ ಮತ್ತು ‘ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್’ ಆಗಿ ಬಳಸಿಕೊಂಡಿತ್ತು ಎನ್ನುವುದಕ್ಕೆ ತಕ್ಷಣದ ಪುರಾವೆಗಳನ್ನೊದಗಿಸುವಲ್ಲಿ ಇಸ್ರೇಲಿ ಸೇನೆಯ ವೈಫಲ್ಯದ ಕುರಿತು ವಾಷಿಂಗ್ಟನ್ ಪೋಸ್ಟ್ ಕೂಡ ವರದಿ ಮಾಡಿತ್ತು.
5. ಗಾಝಾ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳ ವಿಶ್ವಾಸಾರ್ಹತೆ
ಗಾಝಾ ಆರೋಗ್ಯ ಸಚಿವಾಲಯವು ಒದಗಿಸಿದ್ದ ಸಾವನೋವುಗಳ ಅಂಕಿಸಂಖ್ಯೆಗಳನ್ನು ಒಪ್ಪಿಕೊಳ್ಳಲು ಇಸ್ರೇಲ್ ಸರಕಾರ ಹಿಂದೇಟು ಹೊಡೆದಿದ್ದನ್ನು ಹಸನ್ ಉಲ್ಲೇಖಿಸಿದ್ದಾರೆ. ಈ ಅಂಕಿಸಂಖ್ಯೆಗಳನ್ನು ವಿಶ್ವಾಸಾರ್ಹ ಎಂದು ಇಸ್ರೇಲಿ ಸೇನೆ ಒಪ್ಪಿಕೊಂಡಿದೆ ಎಂದು ಬೆಟ್ಟು ಮಾಡಿರುವ ಅವರು,ಸರಕಾರದ ವಿರೋಧಾಭಾಸದ ನಿಲುವನ್ನು ಒತ್ತಿ ಹೇಳಿದ್ದಾರೆ. ಗಾಝಾದಲ್ಲಿ ಸಾವುನೋವುಗಳ ಬಗ್ಗೆ ಯಾವುದೇ ಉತ್ಪ್ರೇಕ್ಷಿತ ವರದಿಗಳಿಲ್ಲ ಎಂಬ ದಿ ಲ್ಯಾನ್ಸೆಟ್ನ ಹೇಳಿಕೆಯನ್ನು ಅವರು ಎತ್ತಿ ತೋರಿಸಿದ್ದಾರೆ.
6. ಗಾಝಾದಲ್ಲಿ ಹಸಿವಿನ ನಿರಾಕರಣೆ
ಗಾಝಾದಲ್ಲಿ ಹಸಿವಿನ ಸಮಸ್ಯೆಯಿಲ್ಲ ಎಂಬ ಇಸ್ರೇಲಿ ಸೇನಾಧಿಕಾರಿಗಳ ಹೇಳಿಕೆಯನ್ನು ಪ್ರಶ್ನಿಸಿರುವ ಹಸನ್, ವಿಶ್ವದ ಅತ್ಯಂತ ಹಸಿದಿರುವ ಐವರು ವ್ಯಕ್ತಿಗಳಲ್ಲಿ ನಾಲ್ವರು ಗಾಝಾದಲ್ಲಿದ್ದಾರೆ ಎಂಬ ವಿಶ್ವ ಆಹಾರ ಕಾರ್ಯಕ್ರಮದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಹಸಿವೆಯಿಂದ ಶಿಶುಗಳು ಸೇರಿದಂತೆ ಸಾವುಗಳಿಗೆ ಕಾರಣವಾಗಿದ್ದ ಭೀಕರ ಮಾನವೀಯ ಪರಿಸ್ಥಿತಿಯನ್ನು ಎತ್ತಿ ತೋರಿಸುವ ಮೂಲಕ ಅವರು ಇಸ್ರೇಲಿ ಸೇನಾಧಿಕಾರಿಗಳ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
7.ಹಮಾಸ್ ಅನ್ನು ಆಯ್ಕೆ ಮಾಡಿದ್ದ ಗಾಝಾ ನಿವಾಸಿಗಳು
ಇಂದು ಕೊಲ್ಲಲ್ಪಡುತ್ತಿರುವ ಗಾಝಾ ನಿವಾಸಿಗಳು ಚುನಾವಣೆಗಳ ಮೂಲಕ ಹಮಾಸ್ನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬ ಇಸ್ರೇಲ್ನ ಸುಳ್ಳನ್ನು ಹಸನ್ ಬಯಲಿಗೆಳೆದಿದ್ದಾರೆ. ಈ ಪ್ರತಿಪಾದನೆಯು ’ಬಿನ್ ಲಾಡೆನ್ ತರ್ಕ ’ವಾಗಿದೆ ಎಂದು ತಳ್ಳಿಹಾಕಿರುವ ಹಸನ್, ಇದು ರಾಜಕೀಯ ಆಯ್ಕೆಗಳನ್ನು ಆಧರಿಸಿ ಕೊಲ್ಲುವ ಹಕ್ಕನ್ನು ಸೂಚಿಸುತ್ತದೆ ಎಂದಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ನಡೆದಿದ್ದ ಕೊನೆಯ ಚುನಾವಣೆಗಳಲ್ಲಿ ಅನೇಕ ಗಾಝಾ ನಿವಾಸಿಗಳು, ವಿಶೇಷವಾಗಿ ಯುವಜನರು ಭಾಗಿಯಾಗಿರಲಿಲ್ಲ ಎಂದು ಅವರು ವಾದಿಸಿದ್ದಾರೆ.
ಗಾಝಾ ನಿವಾಸಿಗಳು ಹಮಾಸ್ನ್ನು ಆಯ್ಕೆ ಮಾಡಿದ್ದರು ಎನ್ನುವುದು ಅಪ್ಪಟ ಸುಳ್ಳು ಎಂದಿರುವ ಹಸನ್ ತನ್ನ ಹೇಳಿಕೆಯನ್ನು ಸಾಬೀತು ಮಾಡಲು, ಗಾಝಾದ ಅರ್ಧದಷ್ಟು ಜನಸಂಖ್ಯೆ 18 ವರ್ಷಕ್ಕೂ ಕಡಿಮೆ ವಯೋಮಾನದವರಾಗಿದ್ದರೆ ಮತ್ತು ಅವರಲ್ಲಿ ಹೆಚ್ಚಿನವರು ಗಾಝಾದಲ್ಲಿ ಕೊನೆಯ ಚುನಾವಣೆಗಳು ನಡೆದಿದ್ದಾಗ ಜನಿಸಿಯೂ ಇರಲಿಲ್ಲ ಎಂದು ವಾದಿಸಿದ್ದಾರೆ. 2006 ಶಾಸಕಾಂಗ ಚುನಾವಣೆಗಳಲ್ಲಿ ಚಲಾವಣೆಯಾಗಿದ್ದ ಹೆಚ್ಚಿನ ಮತಗಳನ್ನು ಹಮಾಸ್ ಗೆದ್ದಿರಲಿಲ್ಲ ಎನ್ನುವುದನ್ನೂ ಅವರು ಬೆಟ್ಟು ಮಾಡಿದ್ದಾರೆ.