ಬೇಹುಗಾರಿಕೆ ಪ್ರಕರಣ | ವಿಕಿಲೀಕ್ಸ್ ನ ಜೂಲಿಯನ್ ಅಸಾಂಜೆ ಜೈಲಿನಿಂದ ಬಿಡುಗಡೆ
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ (Photo: X/wikileaks)
ಬೆಲ್ಮಾರ್ಷ್ (ಬ್ರಿಟನ್): ಅಮೆರಿಕ ಬೇಹುಗಾರಿಕೆ ಕಾನೂನು ಉಲ್ಲಂಘಿಸಿದ ಪ್ರಕರಣದಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ತಪ್ಪೊಪ್ಪಿಕೊಳ್ಳಲು ಸಮ್ಮತಿಸಿದ ಕಾರಣ, ಸೋಮವಾರ (ಸ್ಥಳೀಯ ಕಾಲಮಾನ) ಬ್ರಿಟನ್ನ ಬೆಲ್ಮಾರ್ಷ್ ಕಾರಾಗೃಹದಿಂದ ಬಿಡುಗಡೆಗೊಂಡರು. ಅವರೀಗ ತಮ್ಮ ತವರು ದೇಶವಾದ ಆಸ್ಟ್ರೇಲಿಯಾಗೆ ಮರಳಲು ಅನುಮತಿ ನೀಡಲಾಗಿದೆ.
ಅಮೆರಿಕದ ವರ್ಗೀಕೃತ ರಾಷ್ಟ್ರೀಯ ಭದ್ರತೆ ದಾಖಲೆಗಳನ್ನು ಬಹಿರಂಗಪಡಿಸಿದ ಏಕೈಕ ಕ್ರಿಮಿನಲ್ ಆರೋಪದಲ್ಲಿ ತಪ್ಪೊಪ್ಪಿಕೊಳ್ಳಲು 52 ವರ್ಷದ ಜೂಲಿಯಾನ್ ಅಸಾಂಜೆ ನಿರ್ಧರಿಸಿದ ಬೆನ್ನಿಗೇ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಸೇನಾಪಡೆಯ ರಹಸ್ಯಗಳನ್ನು ಬಹಿರಂಗಪಡಿಸಿದ ಆರೋಪದಲ್ಲಿ ಶಿಕ್ಷೆಗೊಳಪಡಿಸಲು ಅಮೆರಿಕವು ಜೂಲಿಯಾನ್ ಅಸಾಂಜೆ ಅವರ ಗಡೀಪಾರಿಗೆ ಮನವಿ ಮಾಡಿದ್ದರಿಂದ, ಅದರ ವಿರುದ್ಧ ಹೋರಾಡುತ್ತಿದ್ದ ಅಸಾಂಜೆಯವರನ್ನು ಬ್ರಿಟನ್ನ ಕಾರಾಗೃಹವೊಂದರಲ್ಲಿ ಬಂಧಿಸಿಡಲಾಗಿತ್ತು. ಬ್ರಿಟನ್ ಸರಕಾರವು ಅವರನ್ನು ಗಡೀಪಾರು ಮಾಡಲು ಜೂನ್ 2022ರಲ್ಲಿ ಸಮ್ಮತಿ ಸೂಚಿಸಿತ್ತು. ಇದೀಗ ಅವರು ಬುಧವಾರ ಅಮೆರಿಕ ಪ್ರಾಂತೀಯ ನ್ಯಾಯಾಲಯದೆದುರು ಹಾಜರಾಗಲಿದ್ದಾರೆ.