ಇದುವರೆಗಿನ ಗರಿಷ್ಠ ತಾಪಮಾನದ ಮಾಸವಾಗಿ ದಾಖಲೆ ಸೇರಿದ ಜುಲೈ
ಸಾಂದರ್ಭಿಕ ಚಿತ್ರ Photo: PTI
ಪ್ಯಾರೀಸ್: ಜುಲೈ ಇದುವರೆಗೆ ಇತಿಹಾಸದಲ್ಲಿ ದಾಖಲಾದ ಗರಿಷ್ಠ ತಾಪಮಾನದ ತಿಂಗಳಾಗಲಿದೆ ಎಂದು ವಿಶ್ವಸಂಸ್ಥೆಯ ಮತ್ತು ಯುರೋಪಿಯನ್ ಒಕ್ಕೂಟದ ತಜ್ಞರು ಗುರುವಾರ ಪ್ರಕಟಿಸಿದ್ದಾರೆ. ಸಾವಿರಾರು ವರ್ಷಗಳಲ್ಲೇ ಕಂಡರಿಯದಷ್ಟು ಉಷ್ಣಾಂಶ ಜುಲೈನಲ್ಲಿ ದಾಖಲಾಗಿದ್ದು, ಇದು ವಿಶ್ವದ ಹವಾಮಾನ ಭವಿಷ್ಯದ ತುಣುಕು ಎಂದು ತಜ್ಞರು ಬಣ್ಣಿಸಿದ್ದಾರೆ.
ಯೂರೋಪ್, ಏಷ್ಯಾ ಹಾಗೂ ಉತ್ತರ ಅಮೆರಿಕದ ಕೆಲ ಭಾಗಗಳಲ್ಲಿ ಅಸಾಧ್ಯ ತಾಪಮಾನ ಜುಲೈನಲ್ಲಿ ದಾಖಲಾಗಿದ್ದು, ಜಾಗತಿಕ ತಾಪಮಾನದ ಜತೆಗೆ ಕೆನಡಾ ಮತ್ತು ದಕ್ಷಿಣ ಯೂರೋಪ್ನಲ್ಲಿ ಸಂಭವಿಸಿದ ಕಾಳ್ಗಿಚ್ಚು ಕೂಡ ಇದಕ್ಕೆ ಪ್ರಮುಖ ಕಾರಣ ಎಂದು ವಿವರಿಸಿದ್ದಾರೆ.
"ಜಾಗತಿಕ ತಾಪಮಾನದ ಯುಗ ಕೊನೆಗೊಂಡಿದೆ. ಜಾಗತಿಕ ಕುದಿಯುವಿಕೆಯ ಯುಗ ಆಗಮಿಸುತ್ತಿದೆ" ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯಾ ಗುಟ್ರೆಸ್ ಹೇಳಿದ್ದಾರೆ.
ಜುಲೈ ತಿಂಗಳ ಮೊದಲ ಮೂರು ವಾರಗಳಲ್ಲಿ ಈಗಾಗಲೇ ಜಾಗತಿಕ ಸರಾಸರಿ ತಾಪಮಾನ ಹಿಂದಿನ ಅವಧಿಗೆ ಹೋಲಿಸಿದರೆ ಸರಾಸರಿಗಿಂತ ಅಧಿಕವಾಗಿತ್ತು ಎಂದು ವಿಶ್ವ ಹವಾಮಾನ ಸಂಸ್ಥೆ ಮತ್ತು ಯೂರೀಪಿನ ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವೀಸ್ (ಸಿ3ಎಸ್) ಹೇಳಿದೆ. 1940ರ ದಶಕದಿಂದ ಇರುವ ದಾಖಲೆಗಳಲ್ಲಿ 2023ರ ಜುಲೈ ಅತ್ಯಂತ ತಾಪಮಾನದ ಮಾಸವಾಗಿ ದಾಖಲಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.