ನೇಪಾಳದ ಪ್ರಧಾನಿಯಾಗಿ ಕೆ.ಪಿ.ಶರ್ಮ ಓಲಿ ನೇಮಕ
Photo : NDTV
ಕಠ್ಮಂಡು : ರಾಜಕೀಯ ಅಸ್ಥಿರತೆಗೆ ಗುರಿಯಾಗಿರುವ ನೇಪಾಳದಲ್ಲಿ ಸ್ಥಿರ ಸರಕಾರ ನೀಡಬೇಕಾದ ಗುರುತರ ಜವಾಬ್ದಾರಿಯೊಂದಿಗೆ ಕೆ.ಪಿ.ಓಲಿ ಮೂರನೆಯ ಬಾರಿಗೆ ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.
ಶುಕ್ರವಾರ ಸಂಸತ್ತಿನಲ್ಲಿ ನಡೆದ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸೋಲು ಅನುಭವಿಸಿದ್ದರಿಂದ ಪ್ರಧಾನಿ ಕಮಲ್ ದಹಲ್ ಪ್ರಚಂಡ ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಅವರ ಬದಲಿಗೆ ಸಂವಿಧಾನದ ವಿಧಿ 76 (2) ಅನ್ವಯ 72 ವರ್ಷದ ಕೆ.ಪಿ.ಶರ್ಮ ಓಲಿ ನೂತನ ಸರಕಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್, ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್-ಯುಎಂಎಲ್) ಹಾಗೂ ನೇಪಾಳಿ ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಪ್ರಧಾನಿಯನ್ನಾಗಿ ಕೆ.ಪಿ.ಶರ್ಮ ಓಲಿ ಅವರನ್ನು ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ನೇಮಕ ಮಾಡಿದ್ದಾರೆ.
ಸೋಮವಾರ ತಮ್ಮ ಸಂಪುಟ ಸಚಿವರೊಂದಿಗೆ ಕೆ.ಪಿ.ಶರ್ಮ ಓಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅವರು ಇದಕ್ಕೂ ಮುನ್ನ ಅಕ್ಟೋಬರ್ 11, 2015ರಿಂದ ಆಗಸ್ಟ್ 2, 2016ರವರೆಗೆ ಹಾಗೂ ಫೆಬ್ರವರಿ 5, 2018ರಿಂದ ಜುಲೈ 13, 2021ರವರೆಗೆ ನೇಪಾಳದ ಪ್ರಧಾನಿಯಾಗಿದ್ದರು.