ವ್ಯಾಟಿಕನ್ ಮಾಧ್ಯಮಕ್ಕೆ ಕನ್ನಡ ಭಾಷೆ ಸೇರ್ಪಡೆ
53ನೇ ಭಾಷೆಯಾಗಿ ಸೇರ್ಪಡೆಯಾದ ಕನ್ನಡ
Photo : vaticannews
ವ್ಯಾಟಿಕನ್ ಸಿಟಿ : ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ಗೆ 53ನೇ ಭಾಷೆಯಾಗಿ ಕನ್ನಡ ಭಾಷೆಯು ಸೇರ್ಪಡೆಗೊಂಡಿದೆ. ಮಂಗಳವಾರದಿಂದ, ವ್ಯಾಟಿಕನ್ ಸುದ್ದಿತಾಣವು ಕನ್ನಡ ಭಾಷೆಯಲ್ಲೂ ಮೂಡಿ ಬರಲಿದೆ. ವ್ಯಾಟಿಕನ್ನಿನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಈ ಬೆಳವಣಿಗೆ ನಡೆದಿದೆ.
“ವ್ಯಾಟಿಕನ್ ಸುದ್ದಿತಾಣದ ಸುದ್ದಿಗಳು ಕನ್ನಡದಲ್ಲಿ ಆರಂಭವಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕರ್ನಾಟಕದ ಧರ್ಮಸಭೆಗೆ ವಿಶ್ವಗುರುಗಳ, ಧರ್ಮಸಭೆಯ ಹಾಗೂ ಜಾಗತಿಕ ವಿದ್ಯಾಮಾನಗಳ ಸುದ್ದಿಗಳು ಕನ್ನಡದಲ್ಲಿ ದೊರಕಿರುವುದು ಅದ್ಭುತವಾಗಿದೆ, ಮಾತ್ರವಲ್ಲದೆ ಅತೀ ಮುಖ್ಯವೂ ಆಗಿದೆ. ಧರ್ಮಸಭೆಯನ್ನು ಪ್ರಪಂಚದ ಎಲ್ಲಾ ಗಡಿಗಳಿಗೂ ವಿಸ್ತರಿಸುತ್ತಿರುವ ಪೋಪ್ ಫ್ರಾನ್ಸಿಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾದೊ ಹೇಳಿದ್ದಾರೆ.
“ಸುದ್ದಿ ಲೇಖನಗಳನ್ನು ಕನ್ನಡದಲ್ಲಿ ಓದುವುದರಿಂದ ಕರ್ನಾಟಕದ ಓದುಗರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ವ್ಯಾಟಿಕನ್ ರೇಡಿಯೋ ಹಾಗೂ ಇತರೆ ಮಾಧ್ಯಮದ ಮೂಲಕವೂ ಜನರು ಪಡೆದುಕೊಳ್ಳಬಹುದು. ಬೆಂಗಳೂರು ಮಹಾಧರ್ಮಕ್ಷೇತ್ರದ ಮಾಧ್ಯಮ ಸಂವಹನ ಕೇಂದ್ರವು ವಿಶ್ವ ಧರ್ಮಸಭೆಯನ್ನು ನಮ್ಮ ಜನರ ಬಳಿಗೆ ಕರೆ ತರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
“ವ್ಯಾಟಿಕನ್ ಸುದ್ದಿತಾಣದ ಭಾಷೆಗಳ ಸಮೂಹಕ್ಕೆ ಇದೀಗ ಕನ್ನಡ ಸೇರ್ಪಡೆಗೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿದ್ದರೂ, ಇಂದಿಗೂ ಅಚಲ ಜೀವಂತಿಕೆಯನ್ನು ಹೊಂದಿದೆ. ಕೆಥೋಲಿಕ್ ಸಮುದಾಯ ಜೀವಂತಿಕೆಯಿಂದ ಇರುವಂತೆಯೇ, 35 ಮಿಲಿಯನ್ ಜನರು ಮಾತನಾಡುವಂತಹ ಭಾಷೆಯೊಂದು ಜೀವಂತಿಕೆಯಿಂದ ಕೂಡಿದೆ. ಇದು ಕನ್ನಡಿಗರ ಸಂಸ್ಕೃತಿಗೆ ಸಂದ ಗೌರವ. ಕನ್ನಡದ ಸುಪ್ರಸಿದ್ಧ ಗಾದೆ ಮಾತು “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತೆ ಪರಿಶ್ರಮ ಎಂದಿಗೂ ಫಲ ನೀಡುತ್ತದೆ”, ಎಂದು ವ್ಯಾಟಿಕನ್ನಿನ ಸಂವಹನ ಪೀಠದ ಮುಖ್ಯಾಧಿಕಾರಿ (ಪ್ರಿಫೆಕ್ಟ್) ಆಗಿರುವ ಡಾ. ಪೌಲ್ ರುಫಿನಿ ಅಭಿಪ್ರಾಯ ಪಟ್ಟಿದ್ದಾರೆ.
“ಯುದ್ಧ ಸಂಕಷ್ಟಗಳು, ಅನಿಶ್ಚಿತತೆ ಮತ್ತು ಹಿಂಸೆಗಳೇ ಮಡುಗಟ್ಟುತ್ತಿರುವ ಐತಿಹಾಸಿಕ ಕಾಲಘಟ್ಟದಲ್ಲಿ, ಧರ್ಮಸಭೆಯು ಸಂವಹನ, ಸಹಭಾಗಿತ್ವ ಹಾಗೂ ಪರಸ್ಪರ ವಿನಿಮಯಕ್ಕೆ ಒತ್ತು ನೀಡುವ ಮೂಲಕ, ರೋಮ್ ಹಾಗೂ ವಿಶ್ವದ ನಡುವೆ ಭಾಂದವ್ಯವನ್ನು ಬೆಸೆಯುತ್ತಿರುವುದು ಉತ್ತಮ ಸಂಗತಿಯಾಗಿದೆ”, ಎಂದು ವ್ಯಾಟಿಕನ್ ಮಾಧ್ಯಮದ ಸಂಪಾದಕೀಯ ನಿರ್ದೇಶಕಿ ಆ್ಯಂಡ್ರಿಯಾ ತೋರ್ನಿಯೆಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
“ಧರ್ಮಸಭೆಯ ವಿಸ್ತಾರ ಅದ್ಭುತವಾಗಿದೆ. 93 ವರ್ಷಗಳ ಹಿಂದೆ, ವಿಶ್ವಗುರು ಹನ್ನೊಂದನೇ ಭಕ್ತಿನಾಥರು ಗುಗ್ಲಿಯೆಲ್ಮೊ ಮಾರ್ಕೋನಿಗೆ, ವಿಶ್ವಕ್ಕೆ ಭರವಸೆಯನ್ನು ತರಲು ಕ್ರೈಸ್ತ ಘೋಷಣೆಯನ್ನು ಪಸರಿಸಿ ಕ್ರಿಸ್ತರ ಧರ್ಮಸಭೆಯನ್ನು ನಿರ್ಮಿಸುವ ಸಲುವಾಗಿ ವ್ಯಾಟಿಕನ್ ರೇಡಿಯೋ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ನೀಡಿದರು”, ಎಂದು ವ್ಯಾಟಿಕನ್ ರೇಡಿಯೋ ಹಾಗೂ ವ್ಯಾಟಿಕನ್ ನ್ಯೂಸ್ ಮುಖ್ಯಸ್ಥರಾದ ಮಾಸ್ಸಿಮಿಲಿಯಾನೊ ಮೆನಿಚೆಟ್ಟಿ ಹೇಳಿದ್ದಾರೆ.
“1990 ರ ದಶಕದಲ್ಲಿ ವಿಶ್ವಗುರುಗಳ ರೇಡಿಯೋ ತರಂಗಗಳು ವಿಯೇಟ್ನಾಂವರೆಗೂ ಹಬ್ಬಿ, ರೇಡಿಯೋ ಕ್ರೈಸ್ತರು ಎಂಬ ಹೊಸ ಪರಿಕಲ್ಪನೆಗೆ ನಾಂದಿ ಹಾಡಿತು. ಇಂದು ಆಧುನಿಕ ತಂತ್ರಜ್ಞಾನ (ಹೃಸ್ವ ತರಂಗ, ಉಪಗ್ರಹ ಹಾಗೂ ಇಂಟರ್ನೆಟ್) ಪ್ರಭುವಿನ ಶುಭಸಂದೇಶವನ್ನು ಜಗತ್ತಿಗೆ ಸಾರಲು ನಮಗೆ ಅನೇಕ ಅವಕಾಶಗಳನ್ನು ನೀಡಿದೆ. ಕನ್ನಡ ಭಾಷೆಯು ಉಲ್ಲಾಸ ಹಾಗೂ ಭ್ರಾತೃತ್ವದ ಮಾದರಿಯಾಗಿದ್ದು, ಜವಾಬ್ದಾರಿಯುತವಾಗಿ, ಒಗ್ಗಟ್ಟಿನಿಂದ ಈ ಹಾದಿಯನ್ನು ಕ್ರಮಿಸಬೇಕಿರುವುದು ನಮ್ಮ ಉದ್ದೇಶ ಹಾಗೂ ಆಶಯವಾಗಿದೆ” ಎಂದು ಅವರು ಹೇಳಿದರು.