ಕೆನ್ಯಾ| ತ್ಯಾಜ್ಯ ರಾಶಿಯಲ್ಲಿ 6 ಮಹಿಳೆಯರ ವಿರೂಪಗೊಂಡ ದೇಹಗಳು ಪತ್ತೆ
PC : X
ನೈರೋಬಿ : ಕೆನ್ಯಾ ರಾಜಧಾನಿ ನೈರೋಬಿಯ ದಕ್ಷಿಣದ ಮುಕುರು ಪ್ರಾಂತದ ಕೊಳೆಗೇರಿಯೊಂದರ ತ್ಯಾಜ್ಯದ ರಾಶಿಯಲ್ಲಿ 6 ಮಹಿಳೆಯರ ವಿರೂಪಗೊಂಡ ದೇಹಗಳು ಪತ್ತೆಯಾಗಿವೆ. ಇದೇ ಪ್ರದೇಶದ ಕಸದ ತೊಟ್ಟಿಯಲ್ಲಿ ಮತ್ತೆ ಮೂವರು ಮಹಿಳೆಯರ ಛಿದ್ರಗೊಂಡ ದೇಹಗಳನ್ನು ತುಂಬಿಸಿಟ್ಟ ಗೋಣಿಚೀಲ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾಳುಬಿದ್ದ ಕಲ್ಲಿನ ಕ್ವಾರಿಯಲ್ಲಿನ ತ್ಯಾಜ್ಯದ ರಾಶಿಯಲ್ಲಿದ್ದ ಗೋಣಿಚೀಲಗಳನ್ನು ಹೊರಗೆಳೆದು ಪರಿಶೀಲಿಸಿದಾಗ ಕತ್ತರಿಸಲ್ಪಟ್ಟ ಕಾಲುಗಳು ಹಾಗೂ ಎರಡು ಮುಂಡ ಪತ್ತೆಯಾಗಿದೆ ಎಂದು ಕೆನ್ಯಾದ ಕ್ರಿಮಿನಲ್ ತನಿಖಾ ಪ್ರಾಧಿಕಾರ (ಡಿಸಿಐ) ಹೇಳಿದೆ.
ವಾಮಾಚಾರ ಅಥವಾ ಸರಣಿ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿರಬಹುದು. ಆದರೆ ತನಿಖೆ ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಒಟ್ಟು 9 ದೇಹಗಳು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರಲ್ಲಿ 7 ಮಹಿಳೆಯರ ಮೃತದೇಹ. ಸರಣಿ ಹತ್ಯೆಯಲ್ಲಿ ಪೊಲೀಸರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ `ಪೊಲೀಸ್ ಮೇಲುಸ್ತುವಾರಿ ಪ್ರಾಧಿಕಾರ'ದ ಅಧಿಕಾರಿಗಳು ಹೇಳಿದ್ದಾರೆ.