ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ: ಭಾರತೀಯ ವ್ಯಕ್ತಿ ಸಾವು, ಇತರ ಇಬ್ಬರಿಗೆ ಗಾಯ
ಪಟ್ನಬಿನ್ ಮ್ಯಾಕ್ಸ್ವೆಲ್ (Photo credit: madhyamam.com)
ಜೆರುಸಲೆಂ: ಲೆಬನಾನ್ನಿಂದ ಉಡಾಯಿಸಲ್ಪಟ್ಟ ಟ್ಯಾಂಕ್-ನಿಗ್ರಹ ಕ್ಷಿಪಣಿ ದಾಳಿಗೆ ಸೋಮವಾರ ಇಸ್ರೇಲ್ನ ಉತ್ತರ ಗಡಿ ಸಮೀಪ ಭಾರತೀಯ ನಾಗರಿಕರೊಬ್ಬರು ಮೃತಪಟ್ಟು ಇತರ ಇಬ್ಬರು ಗಾಯಗೊಂಡಿದ್ದಾರೆ. ಉತ್ತರ ಗಡಿಯ ಮಾರ್ಗಲಿಯೊಟ್ ಸಮುದಾಯವಿರುವ ಸ್ಥಳದಲ್ಲಿ ಈ ದಾಳಿ ನಡೆದಿದೆ.
ಮೃತ ವ್ಯಕ್ತಿ ಹಾಗೂ ಇತರ ಇಬ್ಬರು ಗಾಯಾಳುಗಳು ಕೇರಳ ಮೂಲದವರೆಂದು ತಿಳಿದು ಬಂದಿದೆ. ಉತ್ತರ ಇಸ್ರೇಲ್ನ ಗಲೀಲೀ ಪ್ರಾಂತ್ಯದ ಸಮುದಾಯ ಕೃಷಿ ಸಮುದಾಯ ಮೊಶವ್ ಎಂಬಲ್ಲಿನ ಪ್ಲಾಂಟೇಶನ್ ಮೇಲೆ ಈ ಕ್ಷಿಪಣಿ ಬಿದ್ದಿದೆ.
ಕೇರಳದ ಕೊಲ್ಲಂನ ಪಟ್ನಬಿನ್ ಮ್ಯಾಕ್ಸ್ವೆಲ್ ಮೃತಪಟ್ಟಿದ್ದಾರೆ. ಬುಶ್ ಜೋಸೆಫ್ ಜಾರ್ಜ್ ಮತ್ತು ಪೌಲ್ ಮೆಲ್ವಿನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಾಳಿಯನ್ನು ಲೆಬನಾನ್ನಲ್ಲಿರುವ ಹಝ್ ಬುಲ್ಲಾ ಪಡೆ ನಡೆಸಿರಬೇಕೆಂದು ಸಂಶಯಿಸಲಾಗಿದೆ. ಈ ಗುಂಪು ಹಮಾಸ್ಗೆ ಬೆಂಬಲವಾಗಿ ಅಕ್ಟೋಬರ್ 8ರಿಂದ ಇಸ್ರೇಲ್ ಮೇಲೆ ರಾಕೆಟ್, ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ.
ಸೋಮವಾರದ ದಾಳಿಯಲ್ಲಿ ಒಟ್ಟು ಏಳು ವಿದೇಶಿ ಕೆಲಸಗಾರರು ಗಾಯಗೊಂಡಿದ್ದಾರೆಂದು ಎಂಡಿಎ ಹೇಳಿದ್ದು ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪಡೆ ಶೆಲ್ ದಾಳಿ ನಡೆಸಿದೆ.