ರಶ್ಯ ಮಿಲಿಟರಿ ಕ್ಯಾಂಟೀನ್ ಮೇಲೆ ಶೆಲ್ ದಾಳಿಯಲ್ಲಿ ಕೇರಳ ನಿವಾಸಿ ಸಾವು
ಸಾಂದರ್ಭಿಕ ಚಿತ್ರ (PTI)
ಮಾಸ್ಕೋ: ರಶ್ಯಾದ ಮಿಲಿಟರಿ ಶಿಬಿರವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ತ್ರಿಶ್ಶೂರು ಜಿಲ್ಲೆಯ ತ್ರಿಕ್ಕುರ್ ಪಂಚಾಯತ್ನ ನಾಯರಗಡಿ ನಿವಾಸಿಯಾಗಿದ್ದ ಸಂದೀಪ್ (36) ಮೃತ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಅವರು ರಶ್ಯಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡಲು ಎಪ್ರಿಲ್ ತಿಂಗಳಿನಲ್ಲಿ ಅಲ್ಲಿಗೆ ಹೋಗಿದ್ದರು.
ರಶ್ಯಾದ ಮಲಯಾಳಿ ಸಂಘದ ಮೂಲಕ ಸಂದೀಪ್ ಕುಟುಂಬಕ್ಕೆ ಎರಡು ದಿನಗಳ ಹಿಂದೆ ಅವರು ಮೃತಪಟ್ಟ ವಿಚಾರ ತಿಳಿದು ಬಂದಿತ್ತು. “ಅಲ್ಲಿನ ಮಿಲಿಟರಿ ಕ್ಯಾಂಟೀನ್ ಮೇಲೆ ಶೆಲ್ ದಾಳಿ ನಡೆದಾಗ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂಬ ಮಾಹಿತಿ ನೀಡಲಾಗಿತ್ತು, ವಿವರಗಳನ್ನು ಪರಿಶೀಲಿಸಿದಾಗ ಅದು ಸಂದೀಪ್ ಎಂದು ತಿಳಿದು ಬಂತು,” ಎಂದು ಅವರ ಸೋದರ ಸಂಬಂಧಿ ಶರಣ್ ಮಾಹಿತಿ ನೀಡಿದ್ದಾರೆ.
ಸಂದೀಪ್ ಜೊತೆ ಕೆಲ ದಿನಗಳಿಂದ ಸಂಪರ್ಕ ಕಳೆದುಹೋಗಿತ್ತು ಎಂದು ಕುಟುಂಬ ಹೇಳಿದೆ.
“ಮಾಸ್ಕೋದಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿ ಒಂದು ತಿಂಗಳ ವೇತನ ಆತ ಕಳಿಸಿದ್ದರು. ನಂತರ ಅಪರೂಪದಲ್ಲಿ ಕುಟುಂಬದ ಜೊತೆ ಸಂಪರ್ಕದಲ್ಲಿದ್ದರು. ನಂತರ ಆತ ಮಿಲಿಟರಿ ಕ್ಯಾಂಟೀನಿನಲ್ಲಿರುವ ಮಾಹಿತಿ ಸಿಕ್ಕಿತು. ಅಲ್ಲಿ ಉಕ್ರೇನ್ ಮಿಲಿಟರಿ ದಾಳಿ ನಡೆದಿರಬಹುದು,” ಎಂದು ಶರಣ್ ಹೇಳಿದ್ದಾರೆ.