ರಶ್ಯ ಸೇನೆಯ ಕರ್ತವ್ಯದಿಂದ ಬಿಡುಗಡೆಗೆ ನೆರವು ಕೋರಿದ ಕೇರಳದ ಯುವಕರು
PC : NDTV
ಮಾಸ್ಕೋ : ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿ ರಶ್ಯಕ್ಕೆ ತೆರಳಿದ್ದ ಕೇರಳದ ಇಬ್ಬರು ಯುವಕರು ಇದೀಗ ಅಲ್ಲಿ ರಶ್ಯದ ಸೇನಾಪಡೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ದುಡಿಯುತ್ತಿದ್ದು ಅಲ್ಲಿಂದ ಬಿಡುಗಡೆಯಾಗಲು ನೆರವು ಯಾಚಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ವಡಕಂಚೇರಿ ನಿವಾಸಿಗಳಾದ 32 ವರ್ಷದ ಬಿನಿಲ್ ಟಿಬಿ ಮತ್ತು 27 ವರ್ಷದ ಜೈನ್ ಟಿ.ಕೆ(ಇಬ್ಬರೂ ಸಂಬಂಧಿಗಳು) ಎಪ್ರಿಲ್ನಲ್ಲಿ ತಿಂಗಳಿಗೆ 12 ಲಕ್ಷ ವೇತನದ ಉದ್ಯೋಗದ ಆಮಿಷಕ್ಕೆ ಒಳಗಾಗಿ ರಶ್ಯಕ್ಕೆ ತೆರಳಿದವರು ಇದೀಗ ಉಕ್ರೇನ್ ಎದುರಿಗಿನ ಯುದ್ಧದಲ್ಲಿ ರಶ್ಯದ ಪದಾತಿ ದಳದ ಯೋಧರಿಗೆ ಆಹಾರ, ನೀರು, ಹಾಗೂ ಇತರ ವಸ್ತುಗಳಿರುವ, ಸುಮಾರು 10.ಕಿ.ಗ್ರಾಂ ತೂಕದ ಬ್ಯಾಗುಗಳನ್ನು ಹೊತ್ತೊಯ್ಯುವ ಸಹಾಯಕ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ರಾತ್ರಿ ಹಗಲೆನ್ನದೆ, ಸಮಯದ ಮಿತಿಯಿಲ್ಲದೆ ಹಾಗೂ ಯುದ್ಧರಂಗದ ಮುಂಚೂಣಿಯಲ್ಲಿ ಸದಾ ಅಪಾಯದಡಿ ದುಡಿಯುತ್ತಿರುವ ತಮ್ನನ್ನು ಅಲ್ಲಿಂದ ಬಿಡಿಸುವಂತೆ ರಶ್ಯದಲ್ಲಿನ ಭಾರತೀಯ ದೂತಾವಾಸಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದು ನೆರವು ಕೋರಿದ್ದಾರೆ ಎಂದು `ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.