ಸ್ಫೋಟಕಗಳ ಶಬ್ದವನ್ನು ಗುಂಡೇಟಿನ ಶಬ್ದವೆಂದು ಭಾವಿಸಿದ ದಕ್ಷಿಣ ಕೊರಿಯಾ: ಉತ್ತರ ಕೊರಿಯಾ ಅಪಹಾಸ್ಯ
Photo: timesofindia.indiatimes.com
ಪ್ರೋಜ : ವಿವಾದಿತ ಗಡಿಭಾಗದ ಯಿಯೋನ್ಪ್ಯೆಂಗ್ ದ್ವೀಪದ ಬಳಿ ಉತ್ತರ ಕೊರಿಯಾ 60 ಸುತ್ತುಗಳ ಫಿರಂಗಿ ಗುಂಡುಗಳನ್ನು ಪ್ರಯೋಗಿಸಿದೆ ಎಂಬ ದಕ್ಷಿಣ ಕೊರಿಯಾದ ಹೇಳಿಕೆಯನ್ನು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ರ ಸಹೋದರಿ ಕಿಮ್ ಯೊ ಜಾಂಗ್ ತಳ್ಳಿಹಾಕಿದ್ದಾರೆ.
ಉತ್ತರ ಕೊರಿಯಾ ಹಾರಿಸಿದ ಫಿರಂಗಿ ಗುಂಡುಗಳು ಉಭಯ ಕೊರಿಯಾಗಳ ಸಮುದ್ರ ವ್ಯಾಪ್ತಿಯನ್ನು ನಿರ್ಧರಿಸುವ ವಿವಾದಿತ ಉತ್ತರ ಮಿತಿ ರೇಖೆ(ಎನ್ಎಲ್ಎಲ್)ಯ ಬಳಿಯಿರುವ ಸಮುದ್ರಕ್ಕೆ ಅಪ್ಪಳಿಸಿವೆ. ಫಿರಂಗಿ ದಾಳಿಯಿಂದ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿಲ್ಲ. ಆದರೆ ಇದು 2018ರ ಮಿಲಿಟರಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಕ್ಷಿಣ ಕೊರಿಯಾ ಶುಕ್ರವಾರ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ ಯೊ ಜಾಂಗ್ ‘ಸಮುದ್ರದ ನೀರಿಗೆ ನಮ್ಮ ಪಡೆಗಳು ಒಂದೇ ಒಂದು ಫಿರಂಗಿ ಗುಂಡನ್ನೂ ಹಾರಿಸಿಲ್ಲ’ ಎಂದಿದ್ದಾರೆ.
‘ನಾವು ಗುಂಡೇಟಿನ ಶಬ್ದವನ್ನು ಅನುಕರಿಸುವ ಸ್ಫೋಟಕಗಳನ್ನು 60 ಬಾರಿ ಸಿಡಿಸಿದೆವು ಮತ್ತು ದಕ್ಷಿಣ ಕೊರಿಯಾದ ಪ್ರತಿಕ್ರಿಯೆಯನ್ನು ವೀಕ್ಷಿಸಿದೆವು. ಫಲಿತಾಂಶ ನಾವು ಎಣಿಸಿದಂತೆಯೇ ಇತ್ತು. ಅವರು ಸ್ಫೋಟಕಗಳ ಶಬ್ದವನ್ನು ಗುಂಡಿನ ಶಬ್ದವೆಂದು ತಪ್ಪಾಗಿ ನಿರ್ಣಯಿಸಿದರು. ಫಿರಂಗಿ ಗುಂಡಿನ ಪ್ರಚೋದನೆ ಎಂದು ಭಾವಿಸಿದರು ಮತ್ತು ನಾಚಿಕೆಯಿಲ್ಲದೆ ಸುಳ್ಳಿನ ಕಂತೆ ಬಿಚ್ಚಿದರು’ ಎಂದವರು ಹೇಳಿದ್ದಾರೆ.
“ಮುಂದಿನ ದಿನಗಳಲ್ಲಿ ಉತ್ತರದ ಆಕಾಶದಲ್ಲಿ ಗುಡುಗಿನ ಸದ್ದಾದರೂ ನಮ್ಮ ಮಿಲಿಟರಿಯ ಫಿರಂಗಿ ದಾಳಿಯೆಂದು ಅವರು ಬೆಚ್ಚಿಬೀಳಬಹುದು’ ಎಂದು ಕಿಮ್ ಅಣಕವಾಡಿದ್ದಾರೆ.