ಇಸ್ರೇಲ್ ಪರ ಹೋರಾಡುತ್ತಿರುವ ಈಶಾನ್ಯದ ಕುಕಿಗಳು
ಗುವಾಹತಿ: ದೂರದ ಇಸ್ರೇಲ್ ನಲ್ಲಿ ಹಮಾಸ್ ವಿರುದ್ಧದ ಹೋರಾಟಕ್ಕೆ 200ಕ್ಕೂ ಹೆಚ್ಚು ಮಂದಿ ಕುಕಿಗಳು ಸಜ್ಜಾಗಿದ್ದಾರೆ. ಅವರ ಸಮುದಾಯಗಳು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿವೆ. ಸೂಕ್ತ ಪ್ರತಿಕ್ರಿಯೆಯ ಹೊಣೆ ಹೊತ್ತಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯ ಭಾಗವಾಗಿ ಇವರು ಹೋರಾಟಕ್ಕೆ ಇಳಿದಿದ್ದಾರೆ.
ಇಸ್ರೇಲ್ ನ ಈ ಬೃಹತ್ ಉದ್ದೇಶಕ್ಕಾಗಿ ಕ್ರೋಢೀಕರಿಸಿರುವ 3.60 ಲಕ್ಷ ಮಂದಿಯ ಪಡೆಯಲ್ಲಿ 206 ಮಂದಿ ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಮಣಿಪುರ ಹಾಗೂ ಮಿಜೋರಾಂ ಮೂಲದವರು. ಸುಮಾರು 5000 ಮಂದಿಯ ಸಮುದಾಯ ಇಸ್ರೇಲ್ ನಲ್ಲಿ ವಾಸವಿದ್ದು, ಕಳೆದುಹೋದ ಯಹೂದಿ ಆದಿವಾಸಿಗಳಾಗಿ ಟೆಲ್ ಅವೀವ್ ಇವರನ್ನು ಪರಿಗಣಿಸಿದ್ದು, ಮುಕ್ತ ನೀತಿಯಿಂದಾಗಿ ಈ ಮಂದಿ ಇಸ್ರೇಲ್ ವಲಸೆ ಹೋಗಿದ್ದಾರೆ.
ಹಮಾಸ್ ಹೋರಾಟಗಾರರು ಇಸ್ರೇಲ್ ಪ್ರವೇಶಿಸಿದಾಗ ಅದರ ನೇರ ಬಿಸಿ ಈ ಸಣ್ಣ ಸಮಮುದಾಯದ ಮೇಲೆ ತಟ್ಟಿತ್ತು. ಬಹುತೇಕ ಮಂದಿ ಕುಕಿಗಳು ಗಾಜಾ ಸಮೀಪದ ಡೆರಾಟ್ ನಲ್ಲಿ ವಾಸವಿದ್ದು, ಈ ಪ್ರದೇಶ ಭೀಕರ ಹಿಂಸಾಚಾರವನ್ನು ಕಂಡ ಪ್ರದೇಶಗಳಲ್ಲೊಂದು. ಇಲ್ಲಿ ದೊಡ್ಡ ಪ್ರಮಾಣದ ಸಾವು ನೋವು ಆಗಿಲ್ಲವಾದರೂ, ಈ ಕುಟುಂಬಗಳ ಮನೆಗಳು ಬೆಂಕಿಗೆ ಆಹುತಿಯಾಗಿವೆ.
ಹಿಬ್ರೂ ಭಾಷೆಯಲ್ಲಿ ಈ ಸಮುದಾಯಕ್ಕೆ ನೀ ಮೆನಾಶೆ ಎಂಬ ಹೆಸರಿದ್ದು, ಮನಸ್ಸೇಯ ಮಕ್ಕಳು ಎಂಬ ಅರ್ಥ. ಯಹೂದಿ ಸಮುದಾಯದ ಈ "ಕಳೆದು ಹೋದ ಬುಡಕಟ್ಟು" ಮತ್ತೆ ಇಸ್ರೇಲ್ ಗೆ ವಲಸೆ ಹೋಗಲು ಸ್ವಯಂಸೇವಾ ಸಂಸ್ಥೆಯೊಂದು ನೆರವಾಗಿದೆ. ಯಹೂದಿಯರ ಪ್ರವಾದಿ ಎನ್ನಲಾದ ಜೋಸೆಫ್ ನ ಪ್ರಥಮ ಪುತ್ರ ಮೆಹಾಶೆ.
ನೀ ಮೆನಾಶೆ ಇಸ್ರೇಲ್ ನಿಂದ ಕಳೆದುಹೋಗಿರುವ 10 ಬುಡಕಟ್ಟುಗಳಲ್ಲಿ ಒಂದಾಗಿದ್ದು, 27 ಶತಮಾನಗಳ ಹಿಂದೆ ಇವರನ್ನು ಗಡೀಪಾರು ಮಾಡಲಾಗಿತ್ತು. ಇವರ ಪೂರ್ವಜರು ಕೇಂದ್ರ ಏಷ್ಯಾ ಮತ್ತು ಪೌರಾತ್ಯ ದೇಶಗಳಲ್ಲಿ ಅಲೆದಾಡುತ್ತಿದ್ದರು. ಬಳಿಕ ಈಶಾನ್ಯ ಭಾರತದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾಗಡಿ ಪ್ರದೇಶದಲ್ಲಿ ನೆಲೆನಿಂತರು ಎಂಬ ಪ್ರತೀತಿ ಇದೆ.