ಸಾಕ್ಷ್ಯಾಧಾರಗಳ ಕೊರತೆ: ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಮೇಲೆ ವಾಹನ ಹರಿಸಿ ಕೊಂದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮವಿಲ್ಲ
Photo: twitter/DcWalaDesi
ವಾಷಿಂಗ್ಟನ್: ತುರ್ತು ಕರೆಯೊಂದರ ಹಿನ್ನೆಲೆಯಲ್ಲಿ ಸ್ಥಳವೊಂದಕ್ಕೆ ತೆರಳುತ್ತಿದ್ದ ವೇಳೆ ಸಿಯಾಟಲ್ನ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಎಂಬಾಕೆಯ ಮೇಲೆ ವಾಹನವನ್ನು ಹರಿಸಿ ಆಕೆಯ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಕೆವಿನ್ ಅವರು ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಯಾವುದೇ ಕ್ರಿಮಿನಲ್ ಪ್ರಕರಣ ಎದುರಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಅಧಿಕಾರಿಯ ವಿಚಾರಣೆಯನ್ನು ಮುಂದುವರಿಸುವುದಿಲ್ಲ ಎಂದು ಕಿಂಗ್ ಕೌಂಟಿ ಪ್ರಾಸಿಕ್ಯೂಟರ್ ಅವರ ಕಚೇರಿ ಹೇಳಿದೆ.
ಕಳೆದ ವರ್ಷದ ಜನವರ 23ರಂದು ಸಿಯಾಟಲ್ನ ರಸ್ತೆಯೊಂದನ್ನು 23 ವರ್ಷದ ಜಾಹ್ನವಿ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಓವರ್ಡೋಸ್ ಸಂಬಂಧಿ ಸಮಸ್ಯೆ ಕುರಿತಾದ ತುರ್ತು ಕರೆಗೆ ಸ್ಪಂದಿಸಿದ್ದ ಅಧಿಕಾರಿ ಕೆವಿನ್ ತಮ್ಮ ವಾಹನವನ್ನು ಆ ಸಂದರ್ಭ ಗಂಟೆಗೆ 120 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದ ಪರಿಣಾಮ ವಾಹನ ಢಿಕ್ಕಿ ಹೊಡೆದಾಕ್ಷಣ ಜಾಹ್ನವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ವಾಷಿಂಗ್ಟನ್ ಸ್ಟೇಟ್ ಕಾನೂನಿನ ಅಡಿಯಲ್ಲಿ ಈ ಪ್ರಕರಣದಲ್ಲಿ ಸಾಕಷ್ಟು ಪುರಾವೆಯ ಕೊರತೆಯಿದೆ ಎಂದು ಪ್ರಾಸಿಕ್ಯೂಟಿಂಗ್ ಅಟಾರ್ನಿ ಡೇನಿಯರ್ ಆಡೆರರ್ ಹೇಳಿದ್ದಾರೆ.
ಆದರೆ ಘಟನೆಯ ಬಾಡಿಕ್ಯಾಮ್ ಫೂಟೇಜ್ನಲ್ಲಿ ಸಿಯಾಟಲ್ ಪೊಲೀಸ್ ಇಲಾಖೆಯ ಅಧಿಕಾರಿ ಡೇನಿಯಲ್ ಆಡೆರರ್ ಈ ಅಪಘಾತವನ್ನು ಗೌಣವಾಗಿ ಪರಿಗಣಿಸಿದ್ದರಲ್ಲದೆ, ಕೆವಿನ್ ಡೇವ್ ಅವರು ತಪ್ಪು ಮಾಡಿದ್ದಾರೆಂಬ ವಾದವನ್ನು ಅಲ್ಲಗಳೆದಿದ್ದರು ಹಾಗೂ ಕ್ರಿಮಿನಲ್ ತನಿಖೆ ಅಗತ್ಯವಿಲ್ಲ ಎಂದಿದ್ದರು. ವಿದ್ಯಾರ್ಥಿನಿ ಸಾವನ್ನಪ್ಪಿರುವುದನ್ನು ಬೊಟ್ಟು ಮಾಡುತ್ತಾ ಡೇನಿಯರ್ ನಗುತ್ತಿರುವ ಬಾಡಿಕ್ಯಾಮ್ ವಿಡಿಯೋ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು.
ಈ ವಿವಾದದ ನಂತರ ಆಡೆರರ್ ಅವರನ್ನು ಗಸ್ತು ಕರ್ತವ್ಯದಿಂದ ವಾಪಸ್ ಪಡೆದು ಕಾರ್ಯಾಚರಣೆ-ರಹಿತ ಹುದ್ದೆಗೆ ನಿಯೋಜಿಸಲಾಗಿತ್ತು.