ಲಾಹೋರ್ | ಅಪಾಯಕಾರಿ ಹಂತಕ್ಕೆ ಕುಸಿದ ವಾಯು ಗುಣಮಟ್ಟ : ಶಾಲೆಗಳಿಗೆ ರಜೆ

ಸಾಂದರ್ಭಿಕ ಚಿತ್ರ | PC : PTI
ಇಸ್ಲಾಮಾಬಾದ್ : ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ ನಲ್ಲಿ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಿದ್ದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ `ಸ್ವೀಕಾರಾರ್ಹ' (ಮಾಲಿನ್ಯ) ಮಿತಿಗಿಂತ 40 ಪಟ್ಟು ಹೆಚ್ಚಿದೆ.
ವಾಯು ಗುಣಮಟ್ಟ ಅಪಾಯಕಾರಿ ಹಂತಕ್ಕೆ ಕುಸಿದ ಕಾರಣ ನಗರದ ಪ್ರಾಥಮಿಕ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮಾರಣಾಂತಿಕ ಪಿಎಂ2.5 ಮಾಲಿನ್ಯಕಾರಕಗಳು (ಆರೋಗ್ಯಕ್ಕೆ ಹೆಚ್ಚು ಹಾನಿಯುಂಟು ಮಾಡುವ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು) 610ಕ್ಕೆ ತಲುಪಿವೆ. 24 ಗಂಟೆಗಳ ಅವಧಿಯಲ್ಲಿ 15ಕ್ಕಿಂತ ಹೆಚ್ಚು ಏರಿಕೆಯಾಗಿದ್ದು ಇದು ಅನಾರೋಗ್ಯಕರ ಎಂದು ವಿಶ್ವಸಂಸ್ಥೆ ಪರಿಗಣಿಸಿದೆ. ಮಾಲಿನ್ಯಕಾರಕಗಳ ವ್ಯಾಪ್ತಿಯನ್ನು ಅಳೆಯುವ ವಾಯು ಗುಣಮಟ್ಟದ ಸೂಚ್ಯಂಕವು 1,067ಕ್ಕೆ ತಲುಪಿದೆ. ಇದುವರೆಗೆ ನಾವು 1,000ದ ಮಟ್ಟವನ್ನೂ ತಲುಪಿರಲಿಲ್ಲ ' ಎಂದು ಲಾಹೋರ್ ನ ಹಿರಿಯ ಪರಿಸರ ಸಂರಕ್ಷಣಾ ಅಧಿಕಾರಿ ಜಹಾಂಗೀರ್ ಅನ್ವರ್ ಹೇಳಿರುವುದಾಗಿ ಎ ಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಡಿಮೆ ದರ್ಜೆಯ ಡೀಸೆಲ್ ಇಂಜಿನ್ಗಳ ಹೊಗೆ ಮತ್ತು ಮಂಜು, ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಉಂಟಾದ ದಟ್ಟ ಹೊಗೆಯಿಂದಾಗಿ ಲಾಹೋರ್ ನಲ್ಲಿ ಕೆಲ ದಿನಗಳಿಂದ ವಾಯು ಗುಣಮಟ್ಟ ಹದಗೆಟ್ಟಿದೆ. ವಾಯು ಮಾಲಿನ್ಯ ಗುಣಮಟ್ಟ ಅಪಾಯಕಾರಿ ಸ್ಥಿತಿಗೆ ತಲುಪಿರುವ ದೇಶದ ನಾಲ್ಕು ನಗರಗಳಲ್ಲಿ ಪ್ರಾಂತೀಯ ಪರಿಸರ ರಕ್ಷಣಾ ಏಜೆನ್ಸಿ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಹೆಚ್ಚು ಹೊಗೆ ಕಾರುವ ಡೀಸೆಲ್ ಇಂಜಿನ್ಗಳನ್ನು ಹೊಂದಿರುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಬದಿ ಆಹಾರ, ತಿಂಡಿಗಳನ್ನು ಮಾರುವ ವ್ಯಾಪಾರಿಗಳು ರಾತ್ರಿ 8 ಗಂಟೆಯ ನಂತರ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದು ಸೋಮವಾರದಿಂದ ಸರಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳು ತಮ್ಮ 50% ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.